ಬೆಂಗಳೂರು,ಅಕ್ಟೋಬರ್,24,2024 (www.justkannada.in): ವಿದ್ಯುತ್ ಸಂಪರ್ಕ ನೀಡಲು16.50 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟು ಅದನ್ನು ಪಡೆಯುತ್ತಿದ್ದ ವೇಳೆ ಬೆಸ್ಕಾಂ ಅವಲಹಳ್ಳಿ ಕಛೇರಿಯ ಎಇಇ ಮತ್ತು ಸೆಕ್ಷನ್ ಆಫಿಸರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಸ್ಕಾಂ ಅವಲಹಳ್ಳಿ ಕಛೇರಿಯ ಎಇಇ ರಮೇಶ್ ಬಾಬು ಮತ್ತು ಸೆಕ್ಷನ್ ಆಫಿಸರ್ ನಾಗೇಶ್ ಲೋಕಾಯುಕ್ತ ಬಲೆಗೆ ಬಿದ್ದವರು. ಪಿ. ಮುತ್ತುಸ್ವಾಮಿ ಎಂಬುವರ ಮಾಲೀಕತ್ವದ ಬೊಮ್ಮನಹಳ್ಳಿ ಗ್ರಾಮದ ಸರ್ವೆ ನಂ. 101/33, 149 ಜಮೀನಿನಲ್ಲಿ ನಿರ್ಮಾಣ ಮಾಡಿರುವ ಲೇಔಟ್ ಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಶ್ರೀ ಚಕ್ರ ಎಲೆಕ್ಟಿಕಲ್ಸ್ ರವರೊಂದಿಗೆ ಒಪ್ಪಂದವಾಗಿತ್ತು.
ಶ್ರೀ ಚಕ್ರ ಎಲೆಕ್ಟಿಕಲ್ ನ ಸೀನಿಯರ್ ಮ್ಯಾನೇಜರ್ ವಿಜಯಕುಮಾರ್ ರವರು ಈ ಬಗ್ಗೆ ದಿನಾಂಕ: 25/09/2024 ರಂದು ಬೆಸ್ಕಾಂ ಅವಲಹಳ್ಳಿ ಕಛೇರಿಯ ಎಇಇ ರಮೇಶ್ ಬಾಬು ರವರನ್ನು ಭೇಟಿ ಮಾಡಿ ವಿಚಾರ ಮಾಡಿದ್ದರು. ಆಗ ಈ ಕೆಲಸಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದಾಗಿ ಸೆಕ್ಷನ್ ಆಫೀಸರ್ ನಾಗೇಶ್ ರವರು ಹೇಳುತ್ತಾರೆ ಅವರನ್ನು ಭೇಟಿಯಾಗಿ ಎಂದಿದ್ದರು. ಅಲ್ಲಿಯವರೆಗೆ ಪೈಲ್ ಪೆಂಡಿಂಗ್ ಇಟ್ಟಿರುವುದಾಗಿ ತಿಳಿಸಿದ್ದರು.
ಈ ನಡುವೆ ವಿಜಯಕುಮಾರ್ ಅದೇ ದಿನ ಸೆಕ್ಷನ್ ಆಫಿಸರ್ ನಾಗೇಶ್ ಅವರನ್ನು ಭೇಟಿ ಮಾಡಿದಾಗ ನಾಗೇಶ್ ಅವರು 16.50 ಲಕ್ಷ ರೂಪಾಯಿಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ವಿಜಯ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ಠಾಣೆ ಮೊಸಂ: 16/2024 ಕಲಂ 7(a) ಪಿ.ಸಿ ಕಾಯ್ದೆ 1988 (ತಿದ್ದುಪಡಿ 2018) ರಂತೆ ಪ್ರಕರಣ ದಾಖಲಾಗಿತ್ತು.
ಈ ಮಧ್ಯೆ ಇಂದು (ಅಕ್ಟೋಬರ್24) ಎಇಇ ರಮೇಶ್ ಬಾಬು ಅವರ ಸೂಚನೆಯಂತೆ ಜೆ.ಇ ನಾಗೇಶ್ ಅವರು ಪಿರ್ಯಾದುದಾರರಿಂದ ಬೊಮ್ಮೇನಹಳ್ಳಿಯ ನ್ಯೂ ರಾಯಲ್ ಪ್ರೆಷ್ ಮಾರ್ಟ್ ಬಳಿ ಲಂಚದ ಹಣವನ್ನು ಪಡೆಯುವಾಗ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟ್ರ್ಯಾಪ್ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಲೋಕಾಯುಕ್ತ ಅಧಿಕಾರಿಗಳು ಹಣವನ್ನ ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಠಾಣೆಯ ಪೊಲೀಸ್ ಅಧೀಕ್ಷಕರಾದ ಪವನ್ ನೆಲ್ಲೂರ್, ಐ.ಪಿ.ಎಸ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಗಳಾದ ರಮೇಶ್, ಹಾಗೂ ಸಿಬ್ಬಂದಿ ವರ್ಗದವರು ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Key words: Lokayukta, Raid, 16.50 Lakh, seized