ಬೆಂಗಳೂರು, ಏಪ್ರಿಲ್ 17,2025 (www.justkannada.in): ಲಾರಿ ಮಾಲೀಕರ ಸಂಘದೊಂದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಮೂರನೇ ಸುತ್ತಿನ ಸಭೆ ಯಶಸ್ವಿಯಾಗಿದ್ದು ಮುಷ್ಕರ ಕೈಬಿಡಲು ಲಾರಿ ಮಾಲೀಕರ ಸಂಘ ತೀರ್ಮಾನಿಸಿದೆ.
ಡಿಸೆಲ್ ಬೆಲೆ ಇಳಿಕೆ ಸೇರಿ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಲಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದರು. ನಿನ್ನೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ನಂತರ ಸಿಎಂ ಸಿದ್ದರಾಮಯ್ಯ ಇಬ್ಬರು ಸಭೆ ನಡೆಸಿದ್ದರು. ಆದರೆ ಎರಡು ಸಭೆ ವಿಫಲವಾಗಿತ್ತು.
ಇಂದು ಮತ್ತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸಭೆ ನಡೆಸಿ ಚರ್ಚಿಸಿದ್ದು ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಅವರು, ಸಚಿವರು ಬಹುತೇಕ ಬೇಡಿಕೆ ಈಡೇರಿಸಿದ್ದಾರೆ. ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ. ಮುಷ್ಕರ ಈ ಸಮಯದಿಂದಲೇ ವಾಪಸ್ ಪಡೆಯುತ್ತೇನೆ ಎಂದು ಘೋಷಣೆ ಮಾಡಿದರು.
20 ವರ್ಷಗಳಲ್ಲಿ ಈಡೇರದ ಬೇಡಿಕೆ ಸಚಿವ ರಾಮಲಿಂಗಾ ರೆಡ್ಡಿ ಈಡೇರಿಸಿದ್ದಾರೆ. ಲಾರಿ ಮುಷ್ಕರದಿಂದ ಆದ ತೊಂದರೆಗೆ ಜನರಲ್ಲಿ ವಿಷಾದ ವ್ಯಕ್ತಪಡಿಸಿದ್ದೇನೆ. ಒಂದು ದಿನದ ಲಾರಿ ಮುಷ್ಕರದಿಂದ 4500 ಕೋಟಿ ರುಪಾಯಿ ನಷ್ಟವಾಗಿದೆ. ಜಿ.ಆರ್. ಷಣ್ಮುಗಪ್ಪ ಹೇಳಿದ್ದಾರೆ.
Key words: Minister, Ramalingareddy, lorry owners, meeting