ಮೈಸೂರು,ಏಪ್ರಿಲ್,15,2025 (www.justkannada.in): ಡೀಸಲ್ ಬೆಲೆ ಏರಿಕೆ, ಟೋಲ್ ದರ ಹೆಚ್ಚಳ ಖಂಡಿಸಿ ರಾಜ್ಯಾದ್ಯಂತ ಲಾರಿ ಮಾಲೀಕರ, ಚಾಲಕರು ಮುಷ್ಕರ ಕೈಗೊಂಡಿದ್ದು ಮುಷ್ಕರಕ್ಕೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಲಾರಿ ಮುಷ್ಕರ ಹಿನ್ನೆಲೆಯಲ್ಲಿ ಲಾರಿಗಳು ರಸ್ತೆಗಿಳಿಯದೆ ಹಾಗೆ ನಿಂತಿದ್ದು, ಸುಮಾರು 9 ಸಾವಿರ ಗೂಡ್ಸ್ ಲಾರಿಗಳು ಸಂಪೂರ್ಣ ಬಂದ್ ಆಗಿದೆ. ಅಗತ್ಯ ವಸ್ತುಗಳ ಸೇವೆ ಹೊರತು ಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧಿಸಲಾಗಿದೆ.
ಡೀಸೆಲ್ ದರ ಕಡಿಮೆ ಮಾಡಬೇಕು, ಟೋಲ್ ದರ ರದ್ದುಗೊಳಿಸಬೇಕು, ಆರ್ಟಿಓ ಗಡಿ ಚೆಕ್ ಪೋಸ್ಟ್ ರದ್ದುಗೊಳಿಸಬೇಕು, ಎಫ್ ಸಿ ಶುಲ್ಕವನ್ನ ಕಡಿಮೆ ಮಾಡಬೇಕು ಎಂದು ವಿವಿಧ ಬೇಡಿಕೆಗಳ ಮುಂದಿಟ್ಟು ಲಾರಿ ಮಾಲೀಕರ ಚಾಲಕರ ಮುಷ್ಕರ ನಡೆಯುತ್ತಿದ್ದು, ನಗರದ ಬನ್ನಿಮಂಟಪದ ಗೂಡ್ಸ್ ಶೆಡ್ ಬಳಿ ಲಾರಿಗಳು ರಸ್ತೆಗಿಳಿಯದೆ ಹಾಗೆಯೇ ನಿಂತಿವೆ.
ಗೂಡ್ಸ್ ರೈಲಿನಲ್ಲಿ ಬಂದಿರುವ ರೈತರ ರಸಗೊಬ್ಬರವನ್ನ ಅನ್ ಲೋಡ್ ಮಾಡದೆ ಹಾಗೆಯೇ ಲಾರಿ ಮಾಲೀಕರು ಮತ್ತು ಚಾಲಕರು ಮುಷ್ಕರದ ಭಾಗಿಯಾಗಿದ್ದು, ಬೇಡಿಕೆ ಈಡೇರುವವರೆಗೂ ಸೇವೆ ಆರಂಭಿಸಲ್ಲ ಎಂದು ಮೈಸೂರು ಲಾರಿ ಮಾಲೀಕರ ಮತ್ತು ಚಾಲಕರ ಒಕ್ಕೂಟ ಪಟ್ಟು ಹಿಡಿದಿದೆ. ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
Key words: Lorry strike, 9,000 goods lorries, Bandh, Mysore