ಎಮ್ವಿ ಎನರ್ಜಿ ಕಂಪನಿಯಿಂದ 15 ಸಾವಿರ ಕೋಟಿ ರೂ. ಹೂಡಿಕೆ: ಎಂ ಬಿ ಪಾಟೀಲ

15,000 crore Investment from MV Energy: M B Patil

ಬೆಂಗಳೂರು, ಫೆ.೨೦,೨೦೨೫:  ಉನ್ನತ ಗುಣಮಟ್ಟದ ಸೋಲಾರ್ ಫೋಟೋವೋಲ್ಟಾಯಿಕ್ ಕೋಶಗಳು ಮತ್ತು ಮಾಡ್ಯೂಲ್ ಉತ್ಪಾದನೆಗೆ ಹೆಸರಾಗಿರುವ, ಬೆಂಗಳೂರು ಮೂಲದ ಎಮ್ವಿ ಎನರ್ಜಿ ಕಂಪನಿಯು ತನ್ನ ಉತ್ಪಾದನಾ ಘಟಕ ಆರಂಭಿಸಲು ಹಂತಹಂತವಾಗಿ 15 ಸಾವಿರ ಕೋಟಿ ರೂಪಾಯಿ ಹೂಡಲು ತೀರ್ಮಾನಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ  ಎಂ ಬಿ ಪಾಟೀಲ ಹೇಳಿದ್ದಾರೆ.

ಗುರುವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಅವರು ಈ ಸಂಬಂಧ ಸಭೆ ನಡೆಸಿದರು.

ಕಂಪನಿಯೊಂದಿಗೆ ಹೂಡಿಕೆ ಸಂಬಂಧ ಇತ್ತೀಚಿಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದು, ಕಾರ್ಯರೂಪಕ್ಕೆ ಬರುತ್ತಿರುವುದು ಸಂತಸದ ಸಂಗತಿ ಎಂದು ಸಚಿವರು ಹೇಳಿದ್ದಾರೆ.

ಕಂಪನಿಯು ಮೊದಲ ಹಂತದಲ್ಲಿ 5,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, 5 ಗಿಗಾವ್ಯಾಟ್ ಸಾಮರ್ಥ್ಯದ ಉತ್ಪಾದನೆ ಮಾಡಲಿದೆ. ಒಟ್ಟು ಯೋಜನೆಯಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದಿದ್ದಾರೆ.

ಎಮ್ವಿ ಎನರ್ಜಿ ಕಂಪನಿಯು ಬೆಂಗಳೂರಿನ ಐಟಿಐಆರ್ ವಲಯದಲ್ಲಿ 120 ಎಕರೆ ಜಮೀನನ್ನು ಕೇಳಿದೆ. ಇದನ್ನು ಸಕಾರಾತ್ಮಕವಾಗಿ ಪರಿಶೀಲಿಸಿ, ಒದಗಿಸಲಾಗುವುದು ಎಂದು ಸಚಿವರು ನಿಯೋಗಕ್ಕೆ ಭರವಸೆ ನೀಡಿದರು.

ಕಂಪನಿಯು ಸೌರವಿದ್ಯುತ್ ಕ್ಷೇತ್ರದಲ್ಲಿ ಬೇಕಾಗುವ ಅಲ್ಯೂಮಿನಿಯಂ ಫ್ರೇಮ್, ಗಾಜು, ಇಪಿಇ, ಜೆಬಿ, ರಿಬ್ಬನ್ ಮತ್ತು ವೇಫರ್ ಉತ್ಪಾದನೆಗೂ ಹೆಸರಾಗಿದೆ. ಇದರಿಂದ ಪರಿಸರಸ್ನೇಹಿ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ ಎರಡನ್ನೂ ಸಾಧಿಸಬಹುದು ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಎಮ್ವಿ ಎನರ್ಜಿ ಕಂಪನಿ ನಿರ್ದೇಶಕ ಸುಹಾಸ್ ದೊಂಥಿ, ವಾಣಿಜ್ಯ ವಹಿವಾಟು ವಿಭಾಗದ ಮುಖ್ಯಸ್ಥ ಸುಮಂತ್‌ ದೊಂಥಿ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

key words: Investment, MV Energy, M B Patil

15,000 crore Investment from MV Energy: M B Patil