ಬೇರೆ ಬೇರೆ ಸರ್ಕಾರದಲ್ಲೂ ಸುಗ್ರೀವಾಜ್ಞೆ: ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರ ಟಾರ್ಗೆಟ್ ಮಾಡಿಲ್ಲ- ಎಂ.ಲಕ್ಷ್ಮಣ್

ಮೈಸೂರು,ಜನವರಿ,27,2025 (www.justkannada.in): ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರದಲ್ಲಿ ಟಾರ್ಗೆಟ್ ಮಾಡಿಲ್ಲ. ಬೇರೆ ಬೇರೆ ಸರ್ಕಾರದ ಆಡಳಿತದಲ್ಲೂ ಸುಗ್ರೀವಾಜ್ಞೆ ತಂದಿದ್ದಾರೆ ಎಂದು ಕೆಪಿಸಿಸಿ ವಕ್ತಾರ  ಎಂ.ಲಕ್ಷ್ಮಣ್ ತಿಳಿಸಿದರು.

ಬೆಂಗಳೂರು ಅರಮನೆ ಆಸ್ತಿಗೆ ಸರ್ಕಾರದಿಂದ ಸುಗ್ರೀವಾಜ್ಞೆ ತರುವ ವಿಚಾರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್,  ಈ ಬಗ್ಗೆ ಇನ್ನೂ ಸುಗ್ರೀವಾಜ್ಞೆ ಆದೇಶವಾಗಿಲ್ಲ. ಸುಗ್ರೀವಾಜ್ಞೆ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಅರಮನೆ ಆಸ್ತಿ ವಿಚಾರವಾಗಿ ಬೇರೆ ಬೇರೆ ಸರ್ಕಾರಗಳ ಆಡಳಿತದಲ್ಲೂ ಸುಗ್ರೀವಾಜ್ಞೆ ತಂದಿದ್ದಾರೆ. 1996 ರಲ್ಲಿ ಹೆಚ್ ಡಿ ದೇವೇಗೌಡರು ಸುಗ್ರೀವಾಜ್ಞೆ ತಂದಿದ್ದರು. ಬೆಂಗಳೂರು ಅರಮನೆ ಸುತ್ತಲಿನ ಜಾಗ ಬೃಂದಾವನ ಅಭಿವೃದ್ಧಿಗಾಗಿ ಸುಗ್ರೀವಾಜ್ಞೆ ಹೊರಡಿಸಿದ್ದರು. ಇದನ್ನು  ಚಾಲೆಂಜ್ ಮಾಡಿ ಜಯಚಾಮರಾಜೇಂದ್ರರ ವಾರಸುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂದು ಹೈ ಕೋರ್ಟ್ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಬಳಿಕ ರಾಜವಂಶಸ್ಥರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆಗ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡಿಕೊಂಡು ಹೋಗಲು ಆದೇಶ ನೀಡಿತು.

ಹಾಗೆಯೇ 2011ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಇಂಟೆರೆಮ್ ಅಪ್ಲಿಕೇಶನ್ ಹಾಕುತ್ತಾರೆ. ರಸ್ತೆ ಟ್ರಾಫಿಕ್ ಜಾಸ್ತಿ ಆಗುತ್ತಿದೆ. ರಸ್ತೆ ಅಗಲೀಕರಣ ಆಗಬೇಕೆಂದು ಅಪ್ಲಿಕೇಶನ್ ಹಾಕುತ್ತಾರೆ. ಸಾರ್ವಜನಿಕರ ಬಳಕೆಗಾಗಿ ಜಾಗ ನೀಡಿದ್ರೆ ತಪ್ಪೇನಿದೆ.? ಮೂರು ಸಾವಿರ ಕೋಟಿ ಹಣ ಕೇಳಿದರೆ ಹೇಗೆ ಕೊಡಲು ಸಾಧ್ಯ. ಸರ್ಕಾರದಿಂದ ಅಷ್ಟು ಪ್ರಮಾಣದ ಹಣ ನೀಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರ ಟಾರ್ಗೆಟ್ ಮಾಡಿಲ್ಲ. ಈ ಬಗ್ಗೆ ಪ್ರಮೋದ ದೇವಿ ಒಡೆಯರ್ ಕಿರುಕುಳ ಆಗುತ್ತಿದೆ ಎಂದು ಹೇಳಿಲ್ಲ. ಅನವಶ್ಯಕವಾಗಿ ಸಿಎಂ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಎಲ್ಲ ಸರ್ಕಾರದ ಅವಧಿಯಲ್ಲೂ ಸುಗ್ರೀವಾಜ್ಞೆ ತರಲಾಗಿದೆ. ಬಿಜೆಪಿಯವರು ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗ ಮೈಸೂರು ಅರಸರ ಮೇಲೆ ದ್ವೇಷ ಸಾಧಿಸುತ್ತಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಎಂ.ಲಕ್ಷ್ಮಣ್ ತಿರುಗೇಟು ನೀಡಿದರು.

ಶ್ರೀರಾಮಲುಗೆ  ಮುಖಭಂಗ ಮಾಡುವ ಕೆಲಸವನ್ನ ಬಿಜೆಪಿಯೇ ಮಾಡುತ್ತಿದೆ.

ಬಿಜೆಪಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು  ನಡುವಿನ ವೈಮನಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್,  ಶ್ರೀರಾಮಲುಗೆ  ಮುಖಭಂಗ ಮಾಡುವ ಕೆಲಸವನ್ನ ಬಿಜೆಪಿಯೇ ಮಾಡುತ್ತಿದೆ. ಅವರನ್ನ ಹೊರಗಡೆ ಕಳಿಸುವ ಕೆಲಸ ಮಾಡುತ್ತಿದೆ. ಶ್ರೀ ರಾಮುಲು ಕಾಂಗ್ರೆಸ್ ಸಿದ್ದಾಂತ ಒಪ್ಪಿ ಬರುವುದಾದರೇ ಸ್ವಾಗತ. ಅವರ ಸಮುದಾಯವನ್ನು ಬಿಜೆಪಿಯವರು ಕೇವಲ ವೋಟಿಗಾಗಿ ಬಳಸಿಕೊಂಡಿದ್ದಾರೆ. ಅವರು ಅಲ್ಲೇ ಇದ್ದರೆ ತುಳಿದು ಬಿಡ್ತಾರೆ, ಅವರಿಗೆ ಅಲ್ಲಿ ಉಳಿಗಾಲ ಇಲ್ಲ. ಬಿಜೆಪಿಗೆ ಅಹಿಂದ ಸಮುದಾಯ ಕಂಡರೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.

ಲೋಕಾಸಭಾ ಚುನಾವಣೆ ಸಂದರ್ಭದಲ್ಲಿ ಬಿಎಸ್ಪಿ ಅಭ್ಯರ್ಥಿ ರೇವತಿ ರಾಜ್ ನಾಮಪತ್ರ ಅಸಿಂಧುಗೊಳಿಸಿದ್ದ ಸಂಬಂಧ ಕೋರ್ಟ್ ಮೆಟ್ಟಿಲೇರಿ ಮರುಚುನಾವಣೆಗೆ ಆಗ್ರಹಿಸಿರುವ ವಿಚಾರ, ಸಂಸದ ಯದುವೀರ್ ಒಡೆಯರ್ ಗೆ ಹೈ ಕೋರ್ಟ್ ನೋಟೀಸ್ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್,  ನಾಮಪತ್ರ ತಿರಸ್ಕೃತ ಬಿಎಸ್ಪಿ ಅಭ್ಯರ್ಥಿಗೆ ನ್ಯಾಯ ಸಿಗಬೇಕು. ಅಭ್ಯರ್ಥಿ ರೇವತಿ ರಾಜ್  ಪರ ನನ್ನ ಬೆಂಬಲವಿದೆ. ಮತ್ತೆ ಚುನಾವಣೆ ನಡೆಸಿ ನ್ಯಾಯ ಒದಗಿಸಬೇಕು. ಈ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಆಕೆಯ ಪರ ನ್ಯಾಯಾಲಯದಲ್ಲೂ ನಾನು ಹೊರಡಲು ಸಿದ್ಧ. ದಲಿತ ಮಹಿಳಾ ಅಭ್ಯರ್ಥಿಗೆ ನ್ಯಾಯ ದೊರಕಬೇಕು. ಆಕೆಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಮತ್ತೆ ಚುನಾವಣೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು. ಆಕೆ ಒಬ್ಬ ಮಹಿಳೆ ಎಂದು ಜನರು ಆಶಿರ್ವಾದ ಮಾಡಬಹುದು. ಅಥವಾ ಗೆಲ್ಲುವ ಅಭ್ಯರ್ಥಿಯ ಮತಗಳನ್ನು ಪಡೆದು ಪರಿಣಾಮ ಬೀರಬಹುದು. ನಾಮಪತ್ರ ತಿರುಸ್ಕೃತಗೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಾಗಲಿಲ್ಲ. ಸಂಪೂರ್ಣ ವಾಗಿ ಭೀಮಪುತ್ರಿಗೆ ನಾನು ಬೆಂಬಲ ನೀಡುತ್ತೇನೆ. ನ್ಯಾಯಾಲಯದಲ್ಲಿ ಅವರ ಪರ  ನಿಲ್ಲುತ್ತೇನೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.

Key words: Ordinances, governments, Bangalore Palace, M. Lakshman