ಮೈಸೂರು,ಮಾರ್ಚ್,8,2025 (www.justkannada.in): ನಿನ್ನೆ ಮಂಡನೆಯಾದ ರಾಜ್ಯ ಬಜೆಟ್ ಬಗ್ಗೆ ಟೀಕಿಸಿದ ಬಿಜೆಪಿ, ಜೆಡಿಎಸ್ ನಾಯಕರಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅಂಕಿ ಅಂಶಗಳನ್ನು ಮುಂದಿಟ್ಟು ತಿರುಗೇಟು ಕೊಟ್ಟಿದ್ದಾರೆ.
2025-26 ನೇ ಸಾಲಿನ ಬಜೆಟ್ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಬಜೆಟ್ ಬಗ್ಗೆ ವಿಪಕ್ಷದ ನಾಯಕರು ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಅದು ಆರೋಗ್ಯಕರ ಟೀಕೆಗಳಾದರೆ ನಾವು ಸ್ವಾಗತಿಸುತ್ತೇವೆ. ಈ ಬಾರಿಯ ಬಜೆಟ್ ಗಾತ್ರ ಶೇ 10.03 ರಷ್ಟು ಹೆಚ್ಚಾಗಿದೆ. 2,92,477 ಕೋಟಿ ವಿವಿಧ ಮೂಲಗಳ ಮೂಲಕ ಟ್ಯಾಕ್ಸ್ ಸಂಗ್ರಹ ಆಗುವ ಗುರಿ ಹೊಂದಿದೆ. ವಿಪಕ್ಷದ ನಾಯಕರು ಸ್ಯಾಡಿಸ್ಟ್ ಮೈಂಡ್ ಇಟ್ಟುಕೊಂಡು ಟೀಕೆ ಮಾಡುತ್ತಾರೆ. ಸಾಲ ಮಾಡಿದ್ದೇ ಸಾಧನೆ ಎಂದು ಜನರಿಗೆ ತಪ್ಪು ತಿಳುವಳಿಕೆ ನೀಡುತ್ತಿದ್ದಾರೆ. 2013 ರಲ್ಲಿ 1.07 ಲಕ್ಷ ಕೋಟಿ ಸಾಲ ಇತ್ತು. ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವ ಸಮಯದಲ್ಲಿ 2018 ರಲ್ಲಿ 2.85 ಲಕ್ಷ ಕೋಟಿ ಸಾಲ ಆಗಿತ್ತು. ಬಳಿಕ ಬಿಜೆಪಿ ಜೆಡಿಎಸ್ ಸರ್ಕಾರದ 5.75 ಲಕ್ಷ ಕೋಟಿ ಮಾಡಿತ್ತು. ಈಗ ಸಿದ್ದರಾಮಯ್ಯ ಅವರು ಬಂದ ಬಳಿಕ ಕಳೆದ ವರ್ಷ ಸಾಲ ಕೇವಲ 65 ಸಾವಿರ ಕೋಟಿ. ಈಗ 1.16 ಲಕ್ಷ ಕೋಟಿ ಬಿಜೆಪಿ, ಜೆಡಿಎಸ್ ಇದ್ದಾಗ ಮಾಡಿದ್ದ ಸಾಲ ನಮಗಿಂತ ಹೆಚ್ಚಾಗಿದೆ ಎಂದು ವಿವರಿಸಿದರು.
ನಮ್ಮ ರಾಜ್ಯದ ಜಿಡಿಪಿ ಬೆಳವಣಿಗೆ 2025 ನೇ ಸಾಲಿನಲ್ಲಿ 30 ಲಕ್ಷ ಕೋಟಿ. ಕೇಂದ್ರದ ಒಟ್ಟು ಜಿಡಿಪಿ 220 ಲಕ್ಷ ಕೋಟಿ. ರಾಜ್ಯದ ಜಿಡಿಪಿಯಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಕಳೆದ ವರ್ಷಕ್ಕಿಂತ 2 ಲಕ್ಷ ಕೋಟಿಯಷ್ಟು ಬೆಳವಣಿಗೆ ಆಗಿದೆ. ಅದರ ಬಗ್ಗೆ ಮಾತನಾಡುವ ಜ್ಞಾನ ಬಿಜೆಪಿ ನಾಯಕರಿಗಿಲ್ಲ. ಅದನ್ನ ಬಿಟ್ಟು ಮುಸ್ಲಿಂ ತುಷ್ಟೀಕರಣ ಮಾಡುವ ಬಜೆಟ್ ಅಂತ ಆರೋಪ ಮಾಡುತ್ತಾರೆ. ಅಲ್ಪಸಂಖ್ಯಾತರಿಗೆ ಈ ಬಾರಿ 4.100 ಕೋಟಿ ಕೇವಲ 1% ಮಾತ್ರ ಅವರಿಗೆ ಕೊಟ್ಟಿರುವುದು. ಜನಸಂಖ್ಯೆ ಆಧಾರದ ಮೇಲೆ ಕೊಡುವುದಾದರೆ ಅವರಿಗೆ 60 ಸಾವಿರ ಕೋಟಿ ಕೊಡಬೇಕು. ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ.? ಮುಸ್ಲಿಮರ ಬಗ್ಗೆ ಮಾತನಾಡದೆ ಇದ್ದರೆ ಬಿಜೆಪಿಯವರಿಗೆ ನಿದ್ದೆ ಬರಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೊಂದು ಸಾಮಾಜಿಕ ನ್ಯಾಯವುಳ್ಳ ಬಜೆಟ್ ಇದು. ನಮ್ಮ ಜಿಡಿಪಿ 7.4% ದೇಶದ ಜಿಡಿಪಿ 6% . ಹಿಂದೆ ಆಡಳಿತ ನಡೆದಿದ್ದ ಬಿಜೆಪಿ ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದ್ದರು. ಅದನ್ನ ತಹಬದಿಗೆ ತರುವ ಕೆಲಸವನ್ನ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಹಿಂದೆ ಇದ್ದ ಡಬಲ್ ಇಂಜಿನ್ ಸರ್ಕಾರ ಕರ್ನಾಟಕ ಸರ್ಕಾರವನ್ನ ಸಂಕಷ್ಟಕ್ಕೆ ಸಿಲುಕಿಸಿ ಹೋಗಿದ್ದರು. ಹಿಂದೆ ಇದ್ದ ಸರ್ಕಾರ ಗುತ್ತಿಗೆದಾರರ ಬಳಿ 40 ಸಾವಿರ ಕೋಟಿ ಉಳಿಸಿ ಹೋಗಿತ್ತು. 15ನೇ ಹಣಕಾಸು ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ 23% ಕಡಿತ ಮಾಡಿದೆ. ಇದರಿಂದ ನಮಗೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದರು. ಸಾಕಷ್ಟು ಸಮಸ್ಯೆಗಳನ್ನ ಕೇಂದ್ರ ಸರ್ಕಾರ ಮಾಡಿದೆ. ಹಲವಾರು ಯೋಜನೆಗಳಲ್ಲಿ ಕೇಂದ್ರ ರಾಜ್ಯಕ್ಕೆ ತಾರತಮ್ಯ ಮಾಡಿದೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಲ್ಲಿ ಸುಮಾರು 240 ಕೋಟಿ ಕೊಡುತ್ತಿದೆ. ಈ ಬಾರಿ ಮೈಸೂರಿಗೆ ಹಿಂದೆಂದೂ ನೀಡದ ಬರಪೂರ ಯೋಜನೆ ಕೊಟ್ಟಿದ್ದಾರೆ. ಸುಮಾರು 24 ಯೋಜನೆಗಳ ಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ಆಳ್ವಿಕೆ ಸಮಯದಲ್ಲಿ ಎಷ್ಟು ಯೋಜನೆ ಕೊಟ್ಟಿದ್ರು ಹೇಳಲಿ. ಗ್ರೇಟರ್ ಮೈಸೂರು ಯೋಜನೆಗೂ ಒಪ್ಪಿಗೆ ಸೂಚಿಸಿದ್ದಾರೆ. ತಾಕತ್ತಿದ್ದರೆ ಅಂಕಿ ಅಂಶಗಳ ಇಟ್ಟುಕೊಂಡು ಚರ್ಚೆಗೆ ಬನ್ನಿ. ರಾಜ್ಯದ 31 ಜಿಲ್ಲೆಗೂ ಕೂಡ ಆದ್ಯತೆ ಕೊಟ್ಟು ಒಳ್ಳೆಯ ಬಜೆಟ್ ನೀಡಿದ್ದಾರೆ. ಯಾರೂ ಕೊಟ್ಟಿರದಷ್ಟು ಕೊಡುಗೆಗಳನ್ನ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಮೈಸೂರಿಗೆ ಒಟ್ಟಾರೆ ಸುಮಾರು 1.100 ಕೋಟಿ ಯೋಜನೆಗಳ ಘೋಷಣೆ ಮಾಡಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.
Key words: BJP, JDS, criticism, state budget, M. Laxman