ಮೈಸೂರು,ಏಪ್ರಿಲ್,25,2025 (www.justkannada.in): ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ , ಬಿಹಾರ ಸೇರಿ ಐದಾರು ರಾಜ್ಯಗಳ ಚುನಾವಣೆ ಮುಂದೆ ಇದೆ. ಹೀಗಾಗಿ ಇಂತಹ ಕೃತ್ಯ ಬಿಜೆಪಿಯವರೇ ನಡೆಸಿರಬಹುದಾ ಎಂಬ ಅನುಮಾನ ಮೂಡಿದೆ. ಇದು ಬಿಜೆಪಿ ಷಡ್ಯಂತ್ರ ಎಂದು ಆರೋಪಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ , ಜಮ್ಮುಕಾಶ್ಮೀರದಲ್ಲಿ ಉಗ್ರರ ದಾಳಿ ಇದು ಇಡೀ ದೇಶವೇ ತಲೆ ತಗ್ಗಿಸುವ ಘಟನೆ. ಈ ಘಟನೆಯನ್ನ ನಾವು ಪಕ್ಷಾತೀತವಾಗಿ ಖಂಡಿಸುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ದೇಶ ಮತ್ತು ಜನರ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ನಮ್ಮ ಬೆಂಬಲ ಇದೆ. ಜಮ್ಮ ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದಿದ್ದರೂ ಭದ್ರತಾ ವ್ಯವಸ್ಥೆ ನಿಯಂತ್ರಣ ಮಾಡೋದು ಕೇಂದ್ರ ಸರ್ಕಾರ. 2 ಸಾವಿರ ಜನ ಏಕಕಾಲಕ್ಕೆ ಕೂತು ಪ್ರಕೃತಿ ವೀಕ್ಷಣೆ ಮಾಡುವಾಗ ಸರಿಯಾದ ಪೋಲಿಸ್ ಭದ್ರತೆ ಕೊಟ್ಟಿಲ್ಲ ಎನ್ನುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬಿಜೆಪಿ ಕಾಲದಲ್ಲೇ ಹೆಚ್ಚಿನ ಸಂಖ್ಯೆಯ ಉಗ್ರರ ದಾಳಿ ಆಗಿದೆ. ಇದರ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಅಂಕಿ ಅಂಶ ಬಿಚ್ಚಿಟ್ಟರು.
ಹಿಂದುನಾ ಎಂದು ಕೇಳಿ ಕೇಳಿ ಕೊಂದಿದ್ದಾರೆ ಎನ್ನುವುದು ಸುಳ್ಳು
ಬಿಹಾರ ಸೇರಿದಂತೆ ಐದಾರು ರಾಜ್ಯಗಳಲ್ಲಿ ಚುನಾವಣೆ ಬರುತ್ತಿದೆ. ಈ ಕಾರಣಕ್ಕೆ ಇಂತಹ ಕೃತ್ಯ ಬಿಜೆಪಿಯವರೇ ನಡೆಸಿರಬಹುದಾ ಎಂಬ ಅನುಮಾನ ಮೂಡಿದೆ. ಸಾವಿನ ಮನೆಯಲ್ಲಿ ರಾಜಕೀಯ ಮಾಡುವ ಪಕ್ಷ ಬಿಜೆಪಿ. ಸಾವನ್ನಪ್ಪಿರುವವರಲ್ಲಿ ಕೇವಲ ಹಿಂದುಗಳಲ್ಲ ಮುಸ್ಲಿಮರೂ ಇದ್ದಾರೆ. ಹಿಂದುನಾ ಎಂದು ಕೇಳಿ ಕೇಳಿ ಕೊಂದಿದ್ದಾರೆ ಎನ್ನುವುದು ಸುಳ್ಳು ಇದೊಂದು ಅಪ ಪ್ರಚಾರ. ಅಲ್ಲಿ ಸಂತ್ರಸ್ತರನ್ನ ಸ್ಥಳೀಯ ಮುಸ್ಲಿಮರೇ ರಕ್ಷಣೆ ಮಾಡಿದ್ದಾರೆ. ಹಿಂದು ಮುಸ್ಲಿಮ್ ಎಂದು ರಕ್ತದ ಮೇಲೆ ರಾಜಕೀಯ ಮಾಡಲು ಬಿಜೆಪಿ ಹೊರಟಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಮ್ಮು ಕಾಶ್ಮೀರದ ಪ್ರವಾಸೋದ್ಯಮ ಕುಸಿದಿದೆ. ಕಾಶ್ಮೀರದ ಉಗ್ರರ ದಾಳಿ ಪ್ರಕರಣ ಕುರಿತು ಬಿಜೆಪಿ ಷಡ್ಯಂತ್ರ ಎಂದು ಆರೋಪಿಸಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಂಪುಟ ಸಭೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಸಿಎಂ ಸಿದ್ದರಾಮಯ್ಯ ಅವರು ಒಂದು ಇತಿಹಾದ ಬರೆದಿದ್ದಾರೆ. ಮೈಸೂರು, ಚಾಮರಾಜನಗರ ಭಾಗದ ಸುಮಾರು 7 ಜಿಲ್ಲೆಗಳಿಗೆ ಸುಮಾರು 3647 ಕೋಟಿ ರೂಗಳ ಅಭಿವೃದ್ಧಿಗೆ ಅನುಮೋದನೆ ಕೊಟ್ಟಿರುವ ಮೂಲಕ ದೊಡ್ಡ ನಿರ್ಧಾರ ಮಾಡಿದ್ದಾರೆ. ಇದೊಂದು ಐತಿಹಾಸಿಕ ನಿರ್ಣಯ ಎನ್ನುವ ಮೂಲಕ ಸಂಪುಟ ಸಭೆಯ ಹಲವು ಯೋಜನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್ , ಪ್ರತಾಪ್ ಸಿಂಹಗೆ ಕೂರಕ್ಕೂ ಜಾಗ ಇಲ್ಲ. ಬಿಜೆಪಿಯವರು ಕಚೇರಿ ಸೇರಿಸಲ್ಲ. ಪುಟ್ ಪಾತ್ ನಲ್ಲಿ ನಿಂತುಕೊಂಡು ಒಂದಷ್ಟು ರೌಡಿ ಶೀಟರ್ ಗಳನ್ನ ಅಕ್ಕಪಕ್ಕ ಇಟ್ಟಕೊಂಡು ಕಿಡಿ ಹಚ್ಚುವ ಕೆಲಸ ಮಾಡುತ್ತಾರೆ.ಅವರಿಗೆ ಮೂರು ಕಾಸಿನ ಬೆಲೆ ಇಲ್ಲ ಎಂದು ಕಿಡಿ ಕಾರಿದರು.
Key words: Kashmir, terrorist attack, BJP, M. Laxman