ಮೈಸೂರು,ಜನವರಿ,4,2025 (www.justkannada.in): ಪ್ರಿನ್ಸಸ್ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಯದುವೀರ್ ಅವರು ಸಲ್ಲಿಸಿದ್ದ ಮ್ಯಾಪ್ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಬಿಡುಗಡೆ ಮಾಡಿದ ಮ್ಯಾಪ್ ತೋರಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, 1921ರ ಮ್ಯಾಪ್ ಅಂತಾ ಬಿಜೆಪಿ ಹೇಳಿದೆ. ಆದರೆ ಈ ಮ್ಯಾಪ್ ಡೂಪ್ಲಿಕೇಟ್, ಸೃಷ್ಟಿ ಮಾಡಿರುವ ಮ್ಯಾಪ್. ಮ್ಯಾಪ್ ನಲ್ಲಿರುವ ಕೆಲ ಹೆಸರುಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ. ರಾಮಕೃಷ್ಣ ವಿದ್ಯಾಶಾಲಾ ಅಂತಾ ಇದೆ. ಅದು ಆರಂಭವಾಗಿದ್ದು 1953 ಅಲ್ಲಿ. ಇದರಲ್ಲಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಹೆಸರಿದೆ. ಅದು ಆರಂಭವಾಗಿದ್ದು 1971. ಅದೇ ರೀತಿ ರೈಲ್ವೇ ಆಸ್ಪತ್ರೆ ಆರಂಭವಾಗಿದ್ದು ಸಹ 1961, ರೈಲ್ವೇ ರೆಸ್ಟ್ ಹೌಸ್ 1970, ಗಣೇಶ್ ಬೀಡಿ ವರ್ಕ್ಸ್ 1945, ಕಾಳಿದಾಸ ರಸ್ತೆ 1951 ರಲ್ಲಿ ಆಗಿದ್ದು, ಒಂಟಿಕೊಪ್ಪಲು 1935, ಪಡುವಾರಳ್ಳಿ 1940ಯಲ್ಲಿ ಆಗಿದ್ದು ಈ ಹಿನ್ನೆಲೆ ಈ ಮ್ಯಾಪ್ ಬಗ್ಗೆ ಅನುಮಾನವಿದೆ ಎಂದರು.
ನಾಲ್ಕು ಜನ ಬಟ್ಟೆ ಬಿಚ್ಚಿಕೊಂಡು ಬೊಂಬಡಿ ಬಜಾಯಿಸುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ರಸ್ತೆ ವಿಚಾರವಾಗಿ ಕೆಪಿಸಿಸಿ ನಿಲುವು ಸ್ಪಷ್ಟವಾಗಿದೆ. ನಮಗೆ ಗೊತ್ತಿದೆ ಅದಕ್ಕೆ ಪ್ರಿನ್ಸೆಸ್ ರಸ್ತೆ ಅಂತಾ ಹೆಸರಿಲ್ಲ. ಅದು ಏನೇ ಆದರೂ ನಾವು ಸಿಎಂ ಸಿದ್ದರಾಮಯ್ಯ ಹೆಸರು ಇಟ್ಟೇ ಇಡುತ್ತೇವೆ. ಬಿಜೆಪಿಯವರು ಎಷ್ಟೇ ಬಾಯಿ ಬಡಿದುಕೊಂಡರೂ ಏನು ಆಗಲ್ಲ. ಬೀದಿಯಲ್ಲಿ ಹೋಗುವವರು ಆಕ್ಷೇಪ ಕೊಟ್ಟರೆ ಕೇಳಲು ಆಗುವುದಿಲ್ಲ. ನಾವು ಆ ಹೆಸರು ಇಟ್ಟೇ ಇಡುತ್ತೇವೆ. ನಮ್ಮ ನಿಲುವಿನಲ್ಲಿ ನಾವು ಸ್ಪಷ್ಟವಾಗಿದ್ದೇವೆ ಎಂದು ಎಂ. ಲಕ್ಷ್ಮಣ್ ಹೇಳಿದರು.
ಬಸ್ ದರ ಏರಿಕೆ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಬಿಜೆಪಿಯವರಿಗೆ ಏನಾದರೂ ಮಾನ ಮರ್ಯಾದೆ ಇದ್ದರೆ ಈ ರೀತಿ ಆಡುತ್ತಿರಲಿಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ 8 ಬಾರಿ ಬಸ್ ದರ ಏರಿಕೆ ಮಾಡಿದರು ಎಂದು ಅಂಕಿ ಅಂಶಗಳ ಸಮೇತ ಬಿಜೆಪಿ ನಾಯಕರಿಗೆ ಎಂ.ಲಕ್ಷ್ಮಣ್ ಟಾಂಗ್ ಕೊಟ್ಟರು.
ಶ್ರೀರಾಮುಲು ಸಾರಿಗೆ ಸಚಿವರಾಗಿದ್ದಾಗ ನೌಕರರು ಮುಷ್ಕರ ಮಾಡಿದ್ದಾಗ ಎಸ್ಮಾ ಜಾರಿ ಮಾಡಿ ಸಾವಿರಾರು ನೌಕರರ ವಜಾ ಮಾಡಿದ್ದಾರೆ. ಅವರೆಲ್ಲ ಕೋರ್ಟು ಕಚೇರಿ ಅಂತ ಅಲೆಯುತ್ತಿದ್ದಾರೆ. ಬಿಜೆಪಿ ಅಧಿಕಾರವಧಿಯಲ್ಲಿ ಕೆಎಸ್ಆರ್ ಟಿಸಿ ನಿಗಮದಲ್ಲಿ 5900 ಕೋಟಿ ಸಾಲದ ಸುಳಿಗೆ ಸಿಲುಕಿತ್ತು. ಈಗ ನಮ್ಮ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ನಿಗಮಕ್ಕೆ 6543 ಕೋಟಿ ಬಿಡುಗಡೆ ಮಾಡಿದೆ. ಶಕ್ತಿ ಯೋಜನೆಯಿಂದ 200 ಕೋಟಿ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಎಂದು ತಿರುಗೇಟು ನೀಡಿದರು.
ಪ್ರತಿಭಟನೆ ವೇಳೆ ಆರ್ ಅಶೋಕ್ ಪೊಲೀಸರ ಜೊತೆ ಮಾತಿನ ಚಕಮಕಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಅಶೋಕ್ ರೌಡಿ ರೀತಿ ವರ್ತಿಸುತ್ತಿದ್ದಾರೆ. ಬೇಜವಾಬ್ದಾರಿಯ ಅಶೋಕ್ ಆ ಸ್ಥಾನಕ್ಕೆ ಅನ್ ಫಿಟ್ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲವಾ ? ಅನುಮತಿ ಪಡೆದು ಪ್ರತಿಭಟನೆ ಮಾಡಿ ಯಾರು ಬೇಡ ಅಂತಾರೆ ? ನಿಮ್ಮ ಯೋಗ್ಯತೆಗೆ ರಾಜ್ಯದ ಪರ ಯಾವತ್ತಾದರೂ ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸಿದ್ದೀರಾ ? ಎಂದು ಎಂ.ಲಕ್ಷ್ಮಣ್ ಗುಡುಗಿದರು.
ಪ್ರಿಯಾಂಕಾ ಖರ್ಗೆ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ವಿರುದ್ದ ಕಿಡಿಕಾರಿದ ಎಂ.ಲಕ್ಷ್ಮಣ್, ಪ್ರಿಯಾಂಕಾ ಖರ್ಗೆ ವಿರುದ್ದ ದಾಖಲೆ ಸಾಕ್ಷ್ಯ ಏನಿದೆ ? ಡೆತ್ ನೋಟ್ ನಲ್ಲಿ ಪ್ರಿಯಾಂಕಾ ಖರ್ಗೆ ಹೆಸರು ಬರೆದಿದ್ದಾರಾ ? ಸ್ವಲ್ಪ ದಿನ ಕಾಯಿರಿ ಜನರೇ ನಿಮಗೆ ಬುದ್ದಿ ಕಲಿಸುತ್ತಾರೆ ಎಂದು ಹರಿಹಾಯ್ದರು.
Key words: Princes Road, M.Laxman, doubts Yaduveer, map