ರಾಮನಗರ:ಆ-18:(www.justkannada.in) ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಜಲಾಶದಲ್ಲಿ ಖಳನಟರಾದ ಉದಯ್ ಹಾಗೂ ಅನಿಲ್ ಸಾವಿನ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ರಾಮನಗರ ಕೋರ್ಟ್, ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿದೆ.
ಈ ಪ್ರಕರಣದ ಕುರಿತು ರಾಮನಗರದ ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಶನಿವಾರ ನಡೆದ ವಿಚಾರಣೆ ನಡೆಯಿತು. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು ಅವರು, ಐವರು ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿದ್ದು, ಆರನೇ ಆರೋಪಿ ಹೆಲಿಕಾಪ್ಟರ್ ಪೈಲೆಟ್ ಪ್ರಕಾಶ್ ಬಿರದಾರ್ ಅವರನ್ನ ಪ್ರಕರಣದಿಂದ ಕೈಬಿಡುವಂತೆ ಆದೇಶ ನೀಡಿದ್ದಾರೆ.
ಮಾಸ್ತಿಗುಡಿ ದುರಂತ ಪ್ರಕರಣದ ಪ್ರಮುಖ ಆರೋಪಿಗಳಾದ ನಿರ್ಮಾಪಕ ಸುಂದರ್ ಪಿ.ಗೌಡ, ನಿರ್ದೇಶಕ ರಾಜಶೇಖರ್, ಸಿದ್ದಾರ್ಥ್ ಅಲಿಯಾಸ್ ಸಿದ್ದು, ಸಾಹಸ ನಿರ್ದೇಶಕ ರವಿವರ್ಮಾ ಮತ್ತು ಎ.ಪಿ.ಭರತ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಹೀಗಾಗಿ ಈ ಐವರು ಆರೋಪಿಗಳಿಗೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಈ ಮೂಲಕ ಪ್ರಕರಣಕ್ಕೆ ಮತ್ತೆ ಜೀವಬಂದಂತಾಗಿದ್ದು, ಸೆ.9ರಿಂದ ವಿಚಾರಣೆ ನಡೆಯಲಿದೆ.
2016, ನ.7ರಂದು ತಿಪ್ಪಗೊಂಡನಹಳ್ಳಿ ಜಲಾಶದಲ್ಲಿ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ನಡೆದಿತ್ತು. ಈ ವೇಳೆ ಯಾವುದೇ ಸುರಕ್ಷಾ ಸಾಧನಗಳಿಲ್ಲದೆ ಹೆಲಿಕಾಪ್ಟರ್ ನಿಂದ 100 ಅಡಿ ಎತ್ತರದಿಂದ ಖಳನಟ ಅನಿಲ್, ಉದಯ್ ಹಾಗೂ ನಾಯಕ ನಟ ದುನಿಯಾ ವಿಜಯ್ ಜಲಾಶಯಕ್ಕೆ ಜಿಗಿದಿದ್ದರು. ಆದರೆ ನಟರಾದ ಉದಯ್ ಹಾಗೂ ಅನಿಲ್ ಗೆ ಈಜು ಬರುತ್ತಿರಲಿಲ್ಲ. ಇದರಿಂದ ಜಲಾಶದ ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಈ ವೇಳೆ ತಕ್ಷಣವೇ ನಟ ದುನಿಯಾ ವಿಜಯ್ ಅವರನ್ನು ತೆಪ್ಪದ ಮೂಲಕ ರಕ್ಷಣೆ ಮಾಡಲಾಗಿತ್ತು. ಆದರೆ ಅನಿಲ್ ಹಾಗೂ ಉದಯ್ ನೋಡ ನೋಡುತ್ತಿದ್ದಂತೆಯೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
‘Maasthi Gudi’ film shooting tragedy case: ramanaga Court rejects plea of prime accused