ಮೈಸೂರು,ಜನವರಿ,28,2023(www.justkannada.in): ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಮಡಿವಾಳ ಸಮುದಾಯಕ್ಕೆ ಒಂದು ಎಂಎಲ್ ಸಿ ಸ್ಥಾನ ಮತ್ತು ಎಸ್.ಸಿಗೆ ಸೇರಿಸಲು ಪ್ರಯತ್ನ ಮಾಡಲಾಗುವುದು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಭರವಸೆ ನೀಡಿದರು.
ಮೈಸೂರು ಜಿಲ್ಲೆ ವರುಣಾ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ವತಿಯಿಂದ ಆಯೋಜಿಸಿದ್ದ ಮಡಿವಾಳರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಮ್ಮ ಸರ್ಕಾರದ ವೇಳೆ ನಿಮ್ಮ ಸಮುದಾಯಕ್ಕೆ ಹೆಚ್ಚು ಅವಕಾಶ ನೀಡುವ ಪ್ರಯತ್ನ ಮಾಡಲಾಗಿತ್ತು. ಈ ಹಿಂದೆ ನಿಮ್ಮದೇ ಸಮುದಾಯದ ವಿದ್ಯಾದರ ಗುರೂಜಿ ಅವರನ್ನ ಎಂಎಲ್ ಸಿ ಮಾಡಿದ್ದವು. ತರೀಕೆರೆ ಕ್ಷೇತ್ರದಿಂದ ಗೋಪಿಕೃಷ್ಣಗೆ ಟಿಕೇಟ್ ನೀಡುವಂತೆ ಬೇಡಿಕೆ ಇಟ್ಟಿದ್ದೀರಿ. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಹಾಗೆಯೇ ನಾವು ಅಧಿಕಾರಕ್ಕೆ ಬಂದರೇ ನಿಮ್ಮ ಸಮುದಾಯದ ಒಬ್ಬರಿಗೆ ಎಂಎಲ್ ಸಿ ಸ್ಥಾನ ನೀಡುತ್ತೇವೆ. ಮಡಿವಾಳ ಸಮುದಾಯವನ್ನ ಎಸ್.ಸಿಗೆ ಸೇರುಸುವಂತೆ ಬೇಡಿಕೆ ಇದೆ. ಅಧಿಕಾರಕ್ಕೆ ಬಂದ ನಂತರ ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತೇವೆ. ಶಿಕ್ಷಣದಲ್ಲಿ ಎಸ್ ಸಿ ಮತ್ತು ಎಸ್ ಟಿ ಸಮುದಾಯಕ್ಕಿರುವ ಸೌಲಭ್ಯಗಳನ್ನ ನಿಮಗೂ ವಿಸ್ತರಿಸಲು ಪ್ರಯತ್ನಿಸಲಾಗುತ್ತದೆ. ಮಡಿವಾಳ ಮಾಚೀದೇವರ ಗುರುಪೀಠಕ್ಕೆ ಹೆಚ್ಚಿನ ಅನುದಾನ ನೀಡುತ್ತೇವೆ ಎಂದು ಸಿದ್ಧರಾಮಯ್ಯ ಭರವಸೆ ನೀಡಿದರು.
ಇದೇ ವೇಳೇ ಕ್ಷೇತ್ರದ ಮಡಿವಾಳ ಸಮಾಜದವರಿಗೆ ಅವಶ್ಯಕತೆ ಇರುವ ಪರಿಕರಗಳನ್ನ ವಿತರಿಸಲಾಯಿತು. ಕರ್ನಾಟಕ ರಾಜ್ಯ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಗೌರವಾಧ್ಯಕ್ಷರಾದ ಎ.ಎಸ್ ರವಿಕುಮಾರ್ , ಸಮಾಜಸೇವಕರಾದ ಹೆಚ್.ಎಂ ಗೋಪಾಲಕೃಷ್ಣ ಮತ್ತಿತ್ತರರು ಉಪಸ್ಥಿತರಿದ್ದರು.
Key words: Madiwal -community – SC -Former CM -Siddaramaiah -mysore