ಬೆಂಗಳೂರು,ಫೆ,24,2020(www.justkannada.in): ಮಹಾದಾಯಿ ಜಲವಿವಾದ ನ್ಯಾಯಾಧೀಕರಣವು ಆಗಸ್ಟ್-14, 2018ರಂದು ನೀಡಿರುವ ಐತೀರ್ಪನ್ನು ಅನುಷ್ಠಾನಗೊಳಿಸಲು ಗೆಜೆಟ್ ಅಧಿಸೂಚನೆ ಹೊರಡಿಸುವ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಮತ್ತೊಮ್ಮೆ ಗೋವಾ ಸರ್ಕಾರ ತಕರಾರು ಮಾಡುತ್ತಿದೆ. ಸುಪ್ರೀಕೋರ್ಟ್ ನೀಡಿರುವ ಆದೇಶಕ್ಕೆ ತಡೆ ಕೋರಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿಕೆ ನೀಡುವ ಮೂಲಕ ದೇಶಕ್ಕೆ ಆಶ್ಚರ್ಯ ತಂದಿದ್ದಾರೆ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಹೆಚ್.ಕೆ ಪಾಟೀಲ್, ಮಹಾದಾಯಿ ನ್ಯಾಯಾಧೀಕರಣದ ಐತೀರ್ಪನ್ನು ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸಲು ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ಮೇಲೆ ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶ ಹೊರಡಿಸುವ ಮುನ್ನ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ವಾದ ವಿವಾದದ ಸಂದರ್ಭದಲ್ಲಿ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಅಧಿಸೂಚನೆ ಪ್ರಕಟಿಸುವುದಕ್ಕೆ ಯಾವುದೇ ತಕರಾರು ಎತ್ತದಿರುವುದು ಮತ್ತು ಪ್ರಸ್ತಾಪಿಸದಿರುವುದರ ಬಗ್ಗೆ ತನ್ನ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯವೇ ಸ್ಪಷ್ಟಪಡಿಸಿದೆ. ಆದರೇ ಸುಪ್ರೀಂ ಆದೇಶಕ್ಕೆ ಗೋವಾ ಸರ್ಕಾರ ತಕರಾರು ಎತ್ತಲು ಮುಂದಾಗಿದೆ. ಗೋವಾ ಸಿಎಂ ಪ್ರಮೋದ ಸಾವಂತ ಅವರು ಎರಡು ಮೂರು ದಿನಗಳಲ್ಲಿ ಆದೇಶಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳುವ ಮೂಲಕ ನ್ಯಾಯಾಲಯದಲ್ಲಿ ಈಗಾಗಲೇ ತಳೆದಿರುವ ನಿಲುವನ್ನು ವಿರೋಧಿಸುವ ಮಟ್ಟಕ್ಕೆ ಹೋಗಿದ್ದಾರೆ. ಅದು ಅಲ್ಲದೇ ಕರ್ನಾಟಕಕ್ಕೆ ನ್ಯಾಯಾಲಯದ ಆದೇಶ ಉಲ್ಲಂಘಿಸುವ ಚಾಳಿ ಇದೆ ಎಂದು ಕಪೋಲ ಕಲ್ಪಿತ ಆರೋಪವನ್ನು ಮಾಡಿದ್ದಾರೆ. ಕಾನೂನಿನ ಆಡಳಿತದಲ್ಲಿ ನಂಬಿಕೆ ಇಟ್ಟಿರುವ ಕರ್ನಾಟಕ ರಾಜ್ಯ ಯಾವಾಗಲೂ ನ್ಯಾಯಾಂಗ ಸಂಸ್ಥೆ ಆದೇಶಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿಲ್ಲ. ಇಂಥ ಆರೋಪಗಳನ್ನು ಮಾಡುವ ಮೂಲಕ ತನ್ನ ಸಣ್ಣತನವನ್ನು ಗೋವಾ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕಿಡಿಕಾರಿದರು.
ಮಹಾದಾಯಿ ನ್ಯಾಯಾಧೀಕರಣದ ಐತೀರ್ಪು ಅಧಿಸೂಚನೆಗೆ ಕರ್ನಾಟಕ ಸರ್ಕಾರ ಯಾವುದೇ ಸಮಯ ವಿಳಂಬವಿಲ್ಲದೇ ಪ್ರಯತ್ನ ಮಾಡಬೇಕು. ಇನ್ನು ಎರಡು ಮೂರು ದಿನಗಳಲ್ಲಿ ಅಧಿಸೂಚನೆ ಪ್ರಕಟಗೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಜಲಸಂಪನ್ಮೂಲ ಸಚಿವರ ಬಳಿ ಕರ್ನಾಟಕದ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಿ ತಕ್ಷಣ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಅಧಿಸೂಚನೆ ಪ್ರಕಟಿಸುವಂತೆ ಮಾಡಬೇಕು. ಇಷ್ಟೆ ಅಲ್ಲದೇ ರಾಜ್ಯದ ಪ್ರತಿಷ್ಠಿತ ಯೋಜನೆಯಾಗಿರುವ ಮಹಾದಾಯಿ ಯೋಜನೆಗೆ ಪ್ರಸ್ತುತ ಅಗತ್ಯವಿರುವ 2000 ಕೋಟಿ ರೂಪಾಯಿಗಳ ಅನುದಾನವನ್ನು ಇದೇ ಮುಂಗಡ ಪತ್ರದಲ್ಲಿ ಘೋಷಣೆ ಮಾಡಬೇಕು. ಇದಲ್ಲದೇ ಸಾಕಷ್ಟು ಸಮಯ ವಿಳಂಬವಾಗಿರುವುದರಿಂದ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳಲು ನೀರಾವರಿ ಸಚಿವರನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.
ಮಹಾದಾಯಿ ಜಲವಿವಾದವು ನಾಲ್ಕು ದಶಕಗಳ ಇತಿಹಾಸವನ್ನು ಹೊಂದಿದ್ದು ಮೊದಲ ಎರಡು ದಶಕಗಳಲ್ಲಿ ಯಾವುದೇ ಪ್ರಗತಿ ಸಾಧಿಸಿರಲಿಲ್ಲ. 1999-2004ರ ಅವಧಿಯ ಕಾಂಗ್ರೆಸ್ ಪಕ್ಷದ ಸರ್ಕಾರದ ಕಾಲದಲ್ಲಿ ಕಳಸಾ-ಬಂಡೂರಿ ಯೋಜನೆಗೆ ಚಾಲನೆ ನೀಡಲಾಯಿತು. ಕೇಂದ್ರ ಸರ್ಕಾರದಿಂದ ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನು ಪಡೆಯಲಾಯಿತು. ರಾಜಕೀಯ ಕಾರಣಗಳಿಗಾಗಿ ಗೋವಾದ ಒತ್ತಡಕ್ಕೆ ಮಣಿದ ಕೇಂದ್ರದ ಅಂದಿನ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ತಾತ್ವಿಕ ಒಪ್ಪಿಗೆ ತಡೆಹಿಡಿದಿತ್ತು. ಗೋವಾದೊಂದಿಗೆ ಕಳೆದ ಹಲವಾರು ಅಂತರಾಜ್ಯ ಸಭೆಗಳ ನಂತರ 2003ರಲ್ಲಿ ಈ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಅರಣ್ಯ ಸಲಹಾ ಸಮಿತಿಯ ಒಪ್ಪಿಗೆಯನ್ನೂ ಪಡೆದುಕೊಳ್ಳಲಾಗಿತ್ತು. ಆದರೆ ಗೋವಾ ಸರ್ಕಾರವು ತಾತ್ವಿಕ ಆದೇಶ ನೆನೆಗುದಿಯಲ್ಲಿಡುವ ಆದೇಶ ಪಡೆದಿದ್ದರಿಂದ ಮುಂದೆ ಯಾವುದೇ ಪ್ರಗತಿ ಸಾಧಿಸಲಾಗಲಿಲ್ಲ ಎಂದರು.
ನ್ಯಾಯಾಧೀಕರಣದ ಮೊರೆ ಹೋದ ಕರ್ನಾಟಕ ಸರ್ಕಾರ ತನ್ನ ಪಾಲಿನ ನೀರನ್ನು ಪಡೆದುಕೊಳ್ಳುವಲ್ಲಿ ಬಾಗಶಃ ಯಶ ಕಂಡಿತು. ಈ ಹಿನ್ನೆಲೆಯಲ್ಲಿ ಈಗ ಬಂದಿರುವ ನ್ಯಾಯಾಧೀಕರಣದ ಆದೇಶ ಮತ್ತು ಸರ್ವೋಚ್ಚ ನ್ಯಾಯಾಲಯದ ಫೆಬ್ರುವರಿ-20ರ ಆದೇಶಗಳು ಕರ್ನಾಟಕಕ್ಕೆ ಪೂರ್ಣವಲ್ಲದಿದ್ದರೂ ಅಲ್ಪಮಟ್ಟಿನ ಸಮಾಧಾನ ತಂದಿದೆ. ತಕ್ಷಣ ಕರ್ನಾಟಕ ಸರ್ಕಾರ ಯಾವುದೇ ವಿಳಂಬವಿಲ್ಲದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಅಧಿಸೂಚನೆ ಪ್ರಕಟಣೆಗೆ ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಸ್ತುತ 2020-21ರ ಮುಂಗಡ ಪತ್ರದಲ್ಲಿಯೇ 2000 ಕೋಟಿ ರೂಪಾಯಿ ಹಣಕಾಸು ಒದಗಿಸುವಂತೆ ಹಾಗೂ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸುವಂತೆ ಒತ್ತಾಯಿಸುತ್ತೇನೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
Key words: Mahadai- River –Controversy- Goa government -disputes -Supreme -Court order-former minister- H, K Patil