ಮೈಸೂರು,ಸೆಪ್ಟೆಂಬರ್,18,2020(www.justkannada.in) : ಪ್ರತಿ ವರ್ಷ ಎಲ್ಲ ಅಧ್ಯಯನ ಪೀಠಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಪುಸ್ತಕ ರೂಪದಲ್ಲಿ ತಂದರೆ ಅದೊಂದು ದಾಖಲೆಯಾಗಿ ಉಳಿಯುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು.
ಕ್ರಾಫಡ್ ಭವನದ ಕುಲಪತಿ ಕಚೇರಿಯಲ್ಲಿ ಶುಕ್ರವಾರ ಮೈಸೂರು ವಿಶ್ವವಿದ್ಯಾನಿಲಯ ಡಾ.ಪಿ.ಆರ್.ತಿಪ್ಪೇಸ್ವಾಮಿ ಪೀಠ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಪ್ರಧಾನ ಸಂಪಾದಕ ಪ್ರೊ.ಎನ್.ಎಂ.ತಳವಾರ್ ಹಾಗೂ ಸಂಪಾದಕ ಡಾ.ಪಿ.ಕೆ.ರಾಜಶೇಖರ ಅವರ ನೇತ್ವದಲ್ಲಿ ಹೊರತಂದಿರುವ “ಜಾನಪದ ಮಾಂತ್ರಿಕ ಪಿ.ಆರ್.ತಿಪ್ಪೇಸ್ವಾಮಿ’’ ಪುಸ್ತಕ ಬಿಡುಗಡೆಗೊಳಿಸಿ ಕುಲಪತಿ ಅವರು ಮಾತನಾಡಿದರು.
ಪಿ.ಆರ್.ತಿಪ್ಪೆಸ್ವಾಮಿ ಅವರು ಅನೇಕ ವಸ್ತುಸಂಗ್ರಹಾಲಯಗಳನ್ನು ಮಾಡಿದ್ದು, ಅವರ ಕುರಿತು ನಡೆಸಿದ ಸಮಾರಂಭಗಳ ಭಾಷಣಗಳನ್ನು ಲೇಖನಗಳನ್ನಾಗಿಸಿ, ಪುಸ್ತಕ ರೂಪದಲ್ಲಿ ಹೊರತಂದಿರುವುದು ವಿಶೇಷವಾಗಿದೆ. ಹೀಗಾಗಿ, ಜಾನಪದ ಮಾಂತ್ರಿಕ ಪಿ.ಆರ್.ತಿಪ್ಪೇಸ್ವಾಮಿ ಪುಸ್ತಕವನ್ನು ಬಹಳ ಸಂತೋಷ ಬಿಡುಗಡೆ ಮಾಡಿದ್ದೇನೆ ಎಂದರು.
ಡಾ.ಪಿ.ಆರ್.ತಿಪ್ಪೇಸ್ವಾಮಿ ಪೀಠದ ಸಂದರ್ಶಕ ಪ್ರಾಧ್ಯಾಪಕ ಡಾ.ಪಿ.ಕೆ.ರಾಜಶೇಖರ್ ಅವರು ಮಾತನಾಡಿ, ಅಧ್ಯಯನ ಪೀಠಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಿದ್ದರೂ, ಪೀಠಗಳು ಸ್ಥಾಪನೆಯಾದ ಹೊರತು ಯಾವುದೇ ಕೆಲಸ ಮಾಡುವುದಿಲ್ಲ ಎಂಬ ಆಕ್ಷೇಪವಿದೆ. ಇದು ತಪ್ಪು ಪರಿಕಲ್ಪನೆ ಎಂದರು.
ನಾನು ತಿಪ್ಪಸ್ವಾಮಿ ಅಧ್ಯಯನ ಪೀಠಕ್ಕೆ ಪ್ರಾಧ್ಯಾಪಕ ಆದಾಗಿನಿಂದಲೂ ಪ್ರತಿ ತಿಂಗಳು ತಿಪ್ಪೆಸ್ವಾಮಿ ಅವರ ಕುರಿತ ಒಂದು ಉಪನ್ಯಾಸ ಹಾಗೂ ಜನಪದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇನೆ. ಉಪನ್ಯಾಸದ ಭಾಷಣಗಳನ್ನು ಲೇಖನ ರೂಪದಲ್ಲಿ ಸಂಗ್ರಹಿಸಿ, ಪುಸ್ತಕ ರೂಪ ಕೊಟ್ಟಿದ್ದೇನೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮೈವಿವಿ ಕುಲಪತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಮೈಸೂರು ವಿವಿ ಕಲಾನಿಕಾಯದ ಡೀನ್ ಪ್ರೊ.ಎನ್.ಎಂ.ತಳವಾರ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ್ ಮತ್ತೀತರರು ಉಪಸ್ಥಿತರಿದ್ದರು.
key words : Maintenance-study-book-book-Prof.G.Hemanth Kumar