ಏ.24 ರಂದು ಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಮೀಟಿಂಗ್ ಗೆ ಭರದ ಸಿದ್ದತೆ: ಭದ್ರತೆಗೆ 2ಸಾವಿರ ಪೊಲೀಸರ ನಿಯೋಜನೆ

ಚಾಮರಾಜನಗರ,ಏಪ್ರಿಲ್,22,2025 (www.justkannada.in): ಏಪ್ರಿಲ್ 24 ರಂದು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ‌ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ  ನಿಗದಿಯಾಗಿದ್ದು ಸಕಲ ಸಿದ್ದತಾ ಕಾರ್ಯಗಳು ಭರದಿಂದ ಸಾಗುತ್ತಿದೆ.

ಮೂರು ಬಾರಿ ಮುಂದೂಡಲ್ಪಟ್ಟ ಮಹತ್ವದ ಸಂಪುಟ ಸಭೆ ಕೊನೆಗೂ ಏಪ್ರಿಲ್ 24 ರಂದು ನಿಗದಿಯಾಗಿದೆ.  ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ  ಮಲೆ ಮಹದೇಶ್ವರ ಬೆಟ್ಟದ ವಜ್ರಮಲೆ ಭವನದ ಮುಂಭಾಗ ಖಾಲಿ ಜಾಗದಲ್ಲಿ ಈ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಕ್ತಾದಿಗಳು ವಸತಿ ಗೃಹದಲ್ಲಿ ತಂಗಲು ನಿರ್ಬಂಧ ವಿಧಿಸಲಾಗಿದೆ.

ಸಚಿವ ಸಂಪುಟ ಸಭೆಗಾಗಿ ಮಲೆ ಮಹದೇಶ್ವರ ಪ್ರಾಧಿಕಾರ, ಜಿಲ್ಲಾಡಳಿತದ ವತಿಯಿಂದ ಭರದಿಂದ ಸಕಲ ಸಿದ್ದತೆ ಕಾರ್ಯಗಳು ಸಾಗುತ್ತಿದೆ. ಬೆಟ್ಟದ ದೀಪದ ಒಡ್ಡುವಿನ ಮಹದೇಶ್ವರರ ಪ್ರತಿಮೆ ಬಳಿ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ದೀಪದ ಒಡ್ಡು ಎತ್ತರ ಪ್ರದೇಶ ಅಲ್ಲಿ ಸಭೆ ನಡೆಸುವುದು ಸೂಕ್ತ ಅಲ್ಲ ಎಂದು ತಜ್ಞರು ತಿಳಿಸಿದ್ದು, ಈಗ ವಜ್ರಮಲೆ ಭವನದ ಮುಂಭಾಗ ಖಾಲಿ ಜಾಗದಲ್ಲಿ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಸುಮಾರು 69 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಜ್ರಮಲೆ ಭವನ ಅಂದೇ ಉದ್ಘಾಟನೆ ಆಗಲಿದೆ.

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರು, ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದು, ಕ್ಯಾಬಿನೆಟ್ ಸಭೆ ನಡೆಯುವ ಸುತ್ತಮುತ್ತ ಹೆಚ್ಚಿನ ಭದ್ರತೆ ವಹಿಸಲಾಗುತ್ತಿದೆ. ಸಚಿವರು, ಶಾಸಕರು, ಮುಖ್ಯ ಕಾರ್ಯದರ್ಶಿ,ಅಪರ ಕಾರ್ಯದರ್ಶಿ ಸೇರಿದಂತೆ ರಾಜ್ಯ ಮಟ್ಟದ ಎಲ್ಲಾ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸುವ ಹಿನ್ನಲೆ ಪ್ರತ್ಯೇಕ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದ್ದು, ವಜ್ರಮಲೆ ಭವನದ ಕೆಳಹಂತಸ್ತೆನಲ್ಲಿ ಸುಮಾರು 300 ವಾಹನಗಳಿಗೆ  ಪಾರ್ಕಿಂಗ್ ವ್ಯವಸ್ಥೆಗೆ ತೀರ್ಮಾನಿಸಲಾಗಿದೆ. ಇದಲ್ಲದೆ ಬೇರೆ ಕಡೆ ಕೂಡ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.

ಸಿಎಂ, ಡಿಸಿಎಂ ಮತ್ತು ಇನ್ನಿತರ ಗಣ್ಯ ವ್ಯಕ್ತಿಗಳು ಹೆಲಿಪ್ಯಾಡ್ ನಲ್ಲಿ ಬರುವ ಹಿನ್ನಲೆ, ಹೆಚ್ಚುವರಿ ತಾತ್ಕಾಲಿಕ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗುತ್ತಿದ್ದು, ಹಾಲಿ ಇರುವ ಹೆಲಿಪ್ಯಾಡ್ ಜೊತೆ ಹಳೆಯೂರು ಬಳಿ ಇನ್ನೂ 3 ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ.

ಸಚಿವ ಸಂಪುಟ ಸಭೆಯ ಬಂದೋಬಸ್ತ್ ಗಾಗಿ ಇಬ್ಬರು ಡಿಐಜಿ, ಇಬ್ಬರು ಎಸ್ಪಿ, 11 ಮಂದಿ ಡಿವೈಎಸ್ಪಿ, 31 ಮಂದಿ ಇನ್ಸ್ ಪೆಕ್ಟರ್ ಸೇರಿದಂತೆ ಸುಮಾರು 2000 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಸಂಪುಟ ಸಭೆಯಲ್ಲಿ ಚಾಮರಾಜನಗರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ಬಗ್ಗೆ ಗಡಿ ಜಿಲ್ಲೆಯ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.  2 ದಶಗಳ ಬಳಿಕ ಇಲ್ಲಿ ನಡೆಯುವ ಮೊದಲ ಸಂಪುಟ ಸಭೆ ಇದಾಗಿದ್ದು, ಜಿಲ್ಲೆಗೆ ವಿಶೇಷ ನೀರಾವರಿ ಯೋಜನೆ, ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹತ್ತಾರು ಯೋಜನೆಯ ನಿರೀಕ್ಷೆಯಲ್ಲಿದ್ದಾರೆ ಚಾಮರಾಜನಗರ ಜನರು.

ವಜ್ರಮಲೆ ಭವನದಲ್ಲಿ ವಿಶೇಷ ಪೂಜೆ ಹೋಮ ಹವನ, ಏ.24 ರಂದು ಉದ್ಘಾಟನೆ

ಮಲೆ ಮಹದೇಶ್ವರ ಬೆಟ್ಟದ ವಜ್ರಮಲೆ ಭವನದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಸಲಾಗಿದೆ. ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ಹೋಮ ಹವನ ನೆರವೇರಿಸಿದ್ದು,  ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಮತ್ತು ಸಿಬ್ಬಂದಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಸುಮಾರು 69 ಕೋಟಿ ವೆಚ್ಚದಲ್ಲಿ 300 ಕ್ಕೂ ಹೆಚ್ಚು ಕೊಠಡಿಗಳಿರುವ ವಸತಿ ಗೃಹಗಳ ಸಮುಚ್ಚಯ ಇದಾಗಿದ್ದು ಅಂದು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೆ  ಮಾಡಲಿದ್ದಾರೆ.

Key words: preparations, cabinet meeting, Male Mahadeshwara Hill