ಮೈಸೂರು,ಅಕ್ಟೋಬರ್,26,2023(www.justkannada.in): ರಾಜ್ಯದಾದ್ಯಂತ ಹುಲಿ ಉಗುರು ಸದ್ದು ಮಾಡುತ್ತಿರುವ ಬೆನ್ನಲ್ಲೇ ಮೈಸೂರಿನಲ್ಲಿ ಅರಣ್ಯಾಧಿಕಾರಿಗಳ ತಂಡ ಮನೆಯೊಂದರ ಮೇಲೆ ದಾಳಿ ಮಾಡಿ ಆನೆಯ ದವಡೆ ಹಲ್ಲೊಂದನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮೈಸೂರಿನ ಉದಯಗಿರಿ ನಿವಾಸಿ ಅಭಿರಾಮ್ ಸುಂದರನ್(70) ಬಂಧಿತ ವ್ಯಕ್ತಿ. ಅಭಿರಾಮ್ ಸುಂದರನ್ ವನ್ಯಜೀವಿ ಸಂರಕ್ಷಣಾ ಕಾನೂನು ಉಲ್ಲಂಘಿಸಿ ಆನೆಯೊಂದರ ದವಡೆ ಹಲ್ಲೊಂದನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡಿದ್ದರು. ಹುಲಿ ಉಗುರು ಹೊಂದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮೈಸೂರು ಅರಣ್ಯಾಧಿಕಾರಿಗಳ ತಂಡ ಅಭಿರಾಮ್ ಸುಂದರನ್ ಅವರ ಮನೆಯಲ್ಲಿ ಶೋಧ ನಡೆಸಿದಾಗ ರೂಮ್ವೊಂದರಲ್ಲಿ ಬಚ್ಚಿಟ್ಟಿದ್ದ ಆನೆಯ ದವಡೆಯ ಹಲ್ಲು ಪತ್ತೆಯಾಗಿದೆ.
ರಾಜ್ಯದ ಹಲವೆಡೆ ಕೆಲ ಸೆಲಿಬ್ರಿಟಿ ಹಾಗೂ ರಾಜಕಾರಣಿಗಳಿಗೆ ಹುಲಿ ಉಗುರು ಉರುಳಾಗಿ ಪರಿಣಿಸಿ, ಬಾರಿ ಸದ್ದು ಮಾಡಿರುವ ಹಿನ್ನೆಲೆಯಲ್ಲಿ ಅನಾಮಿಕರೊಬ್ಬರು ನೀಡಿದ ಮಾಹಿತಿ ಆಧರಿಸಿ, ಶೋಧ ನಡೆಸಿದಾಗ ಆನೆ ದವಡೆ ಹಲ್ಲು ಪತ್ತೆಯಾಗಿದೆ. ಆರೋಪಿ ಮನೆಯಲ್ಲಿ ಸಿಕ್ಕಿರುವ ದವಡೆ ಹಲ್ಲು ಎರಡು ಕೆಜಿ ತೂಕ, 17 ಸೆ.ಮೀ ಉದ್ದ, 9 ಸೆ.ಮಿ ಅಗಲವಿದೆ. ಮದ್ಯ ವಯಸ್ಕ ಆನೆಯ ದವಡೆ ಹಲ್ಲು ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಬಂದಿತ ವ್ಯಕ್ತಿ ಹಲವು ವರ್ಷದ ಹಿಂದೆ ಹೆಚ್.ಡಿ.ಕೋಟೆಯಲ್ಲಿ ವ್ಯಕ್ತಿಯೊಬ್ಬರಿಂದ ಆನೆ ದವಡೆ ಹಲ್ಲು ಪಡೆದಿದ್ದಾಗಿ ಹೇಳಿಕೆ ನೀಡಿದ್ದಾರೆ.
ಆನೆ ದವಡೆ ಹಲ್ಲು ಮನೆಯಲ್ಲಿಟ್ಟುಕೊಂಡರೆ ಒಳಿತಾಗುತ್ತದೆ ಎಂಬ ಮೂಡನಂಭಿಕೆ ಹಲವರಲ್ಲಿದೆ. ಅಲ್ಲದೆ, ಮೈಮೇಲಾಗುವ ಮಚ್ಚೆ ಹೋಗಲಾಡಿಸಲು ಔಷಧಿಯಾಗಿ ಬಳಸುತ್ತಾರೆ ಎಂಬ ತಪ್ಪು ಕಲ್ಪನೆಯಿದ್ದು, ಇದೀಗ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ, ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡಿದ್ದ ಆನೆ ದವಡೆ ಹಲ್ಲನ್ನು ವಶಕ್ಕೆ ಪಡೆದು, ಆರೋಪಿ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಂತೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಡಿಸಿಎಫ್ ಡಾ.ಕೆ.ಎನ್.ಬಸವರಾಜು ಮಾರ್ಗದರ್ಶನದಲ್ಲಿ ಎಸಿಎಫ್ ಎನ್.ಲಕ್ಷ್ಮೀಕಾಂತ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆರ್ಎಫ್ಓ ಕೆ.ಸುರೇಂದ್ರ, ಧನ್ಯಶ್ರೀ, ಡಿಆರ್ಎಫ್ ಮೋಹನ್, ಚಂದ್ರಶೇಖರ್, ಮೋಹನ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Key words: man – elephant- jaw- teeth – arrested-mysore