ಮೈಸೂರು,ಸೆ,7,2019(www.justkannada.in): ಕಡ್ಡಾಯ ವರ್ಗಾವಣೆ ಸಂಬಂಧ ಇಂದು ನಡೆಯಬೇಕಿದ್ದ ವರ್ಗಾವಣೆ ಕೌನ್ಸಿಲಿಂಗ್ ಅನ್ನ ಶಿಕ್ಷಕ ವರ್ಗ ಸಾಮೂಹಿಕವಾಗಿ ಬಹಿಷ್ಕರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ವರ್ಗಾವಣೆ ನೀತಿಯಲ್ಲಿನ ಅವೈಜ್ಞಾನಿಕ ನೀತಿಯನ್ನ ವಿರೋಧಿಸಿ ಶಿಕ್ಷಕರು ವರ್ಗಾವಣೆಯನ್ನ ಬಹಿಷ್ಕರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಮಹಾರಾಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಎನ್ ಟಿಎಂಎಸ್) ಅವರಣದಲ್ಲಿ ಕಡ್ಡಾಯ ವರ್ಗಾವಣೆ ಸಂಬಂಧ ಇಂದು ಕೌನ್ಸಿಲಿಂಗ್ ಗೆ ಸಿದ್ಧತೆ ನಡೆಸಲಾಗಿತ್ತು.
ಈ ಕೌನ್ಸಿಲಿಂಗ್ ಗೆ ಹಾಜರಾದ ಶಿಕ್ಷಕ ವೃಂದ ಬಳಿಕ ಸಭೆ ನಡೆಸಿ ವರ್ಗಾವಣೆ ಪಟ್ಟಿಯಲ್ಲಿದ್ದ ಕೆಲವರ ಹೆಸರನ್ನ ಕೈಬಿಟ್ಟು ರಾತ್ರೋರಾತ್ರಿ ಮತ್ತೊಂದು ಹೊಸಪಟ್ಟಿಯನ್ನ ತಯಾರಿಸಿದ್ದಾರೆ. ಅಲ್ಲದೆ ‘ಎ’ ಪಟ್ಟಿ ‘ಬಿ’ ಪಟ್ಟಿ ಎಂದು ವಿಭಾಗ ಮಾಡಲಾಗಿದೆ. ಇದು ವರ್ಗಾವಣೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಹಲವಾರು ಗೊಂದಲಗಳಿಗೆ ಕಾರಣವಾಗಿದೆ. ಹೀಗಾಗಿ ಪಟ್ಟಿ ಬದಲಾವಣೆಗೆ ಏನು ಕಾರಣ ಗೊತ್ತಾಗಬೇಕು. ಜತೆಗೆ ಕಡ್ಡಾಯ ವರ್ಗಾವಣೆ ಅವೈಜ್ಞಾನಿಕ. ಇದೇ ರೀತಿ ರಾಜ್ಯದ ಬೇರೆ ಭಾಗದಲ್ಲೂ ಕೌನ್ಸಿಲಿಂಗ್ ಬಹಿಷ್ಕರಿಸಲಾಗಿದೆ. ಹೀಗಾಗಿ ನಮಗೆ ನ್ಯಾಯ ದೊರಕುವವರೆಗೂ ಕೌನ್ಸಿಲಿಂಗ್ ಗೆ ಬಹಿಷ್ಕರಿಸುತ್ತೇವೆ ಎಂದು ಶಿಕ್ಷಕ ವರ್ಗ ತಿಳಿಸಿದೆ.
ಈಗಾಗಲೇ ನ್ಯಾಯಾಲಯದಲ್ಲಿಯೂ ಸಹ ಕಡ್ಡಾಯ ವರ್ಗಾವಣೆಗೆ ಅಸಮ್ಮತಿ ಸೂಚಿಸಿದೆ. ಹಾಗೆಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೂ ಖುದ್ದು ಅವೈಜ್ಞಾನಿಕ ಕ್ರಮ ಎಂದು ಹೇಳಿಕೆ ನೀಡಿದ್ದಾರೆ. ಇಷ್ಟಾದರೂ ಕಡ್ಡಾಯ ವರ್ಗಾವಣೆ ನಡೆಸಲು ಕಾರಣವೇನು ಎಂದು ಶಿಕ್ಷಕ ವರ್ಗ ಪ್ರಶ್ನಿಸಿದ್ದಾರೆ.
ಅಧಿಕಾರಿಗಳಿಂದ ಮನವೊಲಿಕೆ…
ಕಡ್ಡಾಯ ವರ್ಗಾವಣೆ ಬಹಿಷ್ಕರಿಸಿದ ಶಿಕ್ಷಕರನ್ನ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸರ್ಕಾರದ ಆದೇಶ.ಹೀಗಾಗಿ ನಾವೇನು ಮಾಡಲು ಆಗುವುದಿಲ್ಲ. ನೀವು ಕೌನ್ಸಿಲಿಂಗ್ ಗೆ ಗೈರಾದರೇ ಡಮ್ಮಿಯಾಗಿ ಕಡ್ಡಾಯ ವರ್ಗಾವಣೆ ಮಾಡುತ್ತೇವೆ ಎಂದು ಡಿಡಿಪಿಐ ತಿಳಿಸಿದ್ದಾರೆ. ಹೀಗಾಗಿ ಅಧಿಕಾರಿಗಳ ಮನವೊಲಿಕೆ ಬಳಿಕ ಶಿಕ್ಷಕರು ಕೌನ್ಸಿಲಿಂಗ್ ಗೆ ಹಾಜರಾಗುತ್ತಿದ್ದು ಮಧ್ಯಾಹ್ನದ ವೇಳೆಗೆ ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ಪ್ರಾರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
Key words: Mandatory- transfer -boycott – teachers – Mysore