ಮಂಡ್ಯ,ಜು,5,2019(www.justkannada.in): ಭೂಮಿಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಗಲಾಟೆ ನಡೆದಿದೆ.
ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳ ನಡುವೆಯೇ ಕಿತ್ತಾಟ ನಡೆದಿದೆ. ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರು ಹಾಗೂ ಮಳವಳ್ಳಿಯ ಹಾಲಿ ಶಾಸಕ ಅನ್ನದಾನಿ ಅವರ ನಡುವೆ ಗಲಾಟೆ ನಡೆದಿದೆ. ಇಂದು ಶಾಸಕ ಅನ್ನದಾನಿ ಮಳವಳ್ಳಿ ತಾಲ್ಲೂಕಿನ ಮಾಗನೂರು ಬಳಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಲು ಮುಂದಾಗಿದ್ದರು.
ಈ ವೇಳೆ ಅಲ್ಲಿಗೆ ಆಗಮಿಸಿದ ಮಾಜಿ ಶಾಸಕ ನರೇಂದ್ರ ಸ್ವಾಮಿ ಬೆಂಬಲಿಗರು,ಈ ಹಿಂದೆ ನರೇಂದ್ರಸ್ವಾಮಿ ಅವರು ಶಾಸಕರಾಗಿದ್ದಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ. ಮತ್ತೆ ಭೂಮಿಪೂಜೆ ಮಾಡೋದು ಸರಿಯಲ್ಲ ಎಂದು ಭೂಮಿ ಪೂಜೆಗೆ ಅಡ್ಡಿಪಡಿಸಿದ್ದಾರೆ. ಈ ಸಮಯದಲ್ಲಿ ಶಾಸಕ ಅನ್ನದಾನಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಸಂದರ್ಭದಲ್ಲಿ ಸಿಟ್ಟಾದ ಶಾಸಕ ಅನ್ನದಾನಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಭೂಮಿ ಪೂಜೆಗೆ ಅಡ್ಡಿಪಡಿಸಿದರೇ ಜೈಲಿಗೆ ಕಳುಹಿಸುತ್ತೇನೆ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ. ನಂತರ ಪೊಲೀಸರು ಭದ್ರತೆ ನಡುವೆ ಶಾಸಕ ಅನ್ನದಾನಿ ಭೂಮಿಪೂಜೆ ನೆರವೇರಿಸಿದರು.
Key words: mandya- congress-workers-jds-mla-annadani-fight