ಕ್ಯಾತನಳ್ಳಿಯಲ್ಲಿ ಶೀಘ್ರ ಗ್ರಾಮವಾಸ್ತವ್ಯ- ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಭರವಸೆ

 

ಮಂಡ್ಯ, ಡಿ.17, 2021 : (www.justkannada.in news ) ಕ್ಯಾತನಳ್ಳಿ ಗ್ರಾಮದಲ್ಲಿ ಶೀಘ್ರದಲ್ಲಿ ಒಂದು ದಿನ ಗ್ರಾಮ ವಾಸ್ತವ್ಯ ಮಾಡಿ, ಇಲ್ಲಿನ ಸಮಸ್ಯೆಗಳನ್ನು ಅರಿತು ಜಿಲ್ಲಾಡಳಿತದ ಜೊತೆ ಮಾತನಾಡಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ವಿಧಾನ ಪರಿಷತ್ ನೂತನ ಸದಸ್ಯರಾದ ದಿನೇಶ್ ಗೂಳಿಗೌಡ ತಿಳಿಸಿದರು.

ಶುಕ್ರವಾರ ಪಾಂಡವಪುರ ಮತ್ತು ಮಳವಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಕೃತಜ್ಞತಾ ಸಮಾರಂಭವನ್ನು ನೂತನ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹಮ್ಮಿಕೊಂಡಿದ್ದರು.

ಈ ವೇಳೆ ಪಾಂಡವಪುರದ ಕ್ಯಾತನಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ದಿನೇಶ್ ಅವರು ಮೊದಲಿಗೆ ರಾಜ್ಯ ರೈತ ಸಂಘದ ಅಧ್ಯಕ್ಷರೂ ಹಾಗೂ ಮಾಜಿ ಶಾಸಕರಾದ ದಿವಂಗತ ಪುಟ್ಟಣ್ಣಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಅವರ ನಿವಾಸಕ್ಕೆ ತೆರಳಿ ಶ್ರೀಮತಿ ಸುನಿತಾ ಪುಟ್ಟಣ್ಣಯ್ಯ ಹಾಗೂ ರೈತ ಮುಖಂಡರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಸುನಿತಾ ಪುಟ್ಟಣ್ಣಯ್ಯ ಅವರು, ಸಮಾಜಮುಖಿ ಮತ್ತು ರೈತರ ಪರವಾಗಿ ಕೆಲಸ ಮಾಡಿ ಜಿಲ್ಲೆಗೆ ಹಾಗೂ ನಾಡಿಗೆ ಉತ್ತಮ ಕೀರ್ತಿ ತರುವಂತೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯೆಗೆ ನೀಡಿದ ದಿನೇಶ್ ಗೂಳಿಗೌಡ , ಕ್ಯಾತನಳ್ಳಿ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತೇನೆ. ಅದಕ್ಕಾಗಿ ಇಲ್ಲಿ ಶೀಘ್ರದಲ್ಲಿಯೇ ವಾಸ್ತವ್ಯ ಹೂಡಿ, ಜಿಲ್ಲಾಡಳಿತದೊಂದಿಗೆ ಬಗೆಹರಿಸಲು ಪ್ರಯತ್ನಿಸುವೆ. ಜೊತೆಗೆ ಸರ್ಕಾರದ ಮಟ್ಟದಲ್ಲಿಯೂ ಸಹ ಪರಿಹಾರಕ್ಕೆ ಯತ್ನಿಸುವೆ ಎಂದು ತಿಳಿಸಿದರು.

ಶಾಲೆ ನೆರವಿಗೆ ಇನ್ಫೋಸಿಸ್ – ದಿನೇಶ್ ಭರವಸೆ

ಕ್ಯಾತನಳ್ಳಿಯಲ್ಲಿ ರೈತ ಸಂಘ ನಡೆಸುತ್ತಿರುವ ಶಾಲೆಗೆ ಸರ್ಕಾರದಿಂದ ನೆರವು ನೀಡುವ ಬಗ್ಗೆ ರೈತ ಮುಖಂಡರು ಪ್ರಸ್ತಾಪಿಸಿದಾಗ, ಪ್ರತಿಕ್ರಿಯೆ ನೀಡಿದ ದಿನೇಶ್ ಅವರು, ಕಾಂಪೌಂಡ್ ಮತ್ತು ಕಟ್ಟಡವನ್ನು ಕಟ್ಟಿಸಲು ಇನ್ಫೋಸಿಸ್ ಫೌಂಡೇಶನ್ ಜೊತೆಗೆ ಚರ್ಚಿಸಿ ನೆರವು ನೀಡುವ ಸಂಬಂಧ ಕೋರುವುದಾಗಿ ತಿಳಿಸಿದರು.

ಪಾಂಡವಪುರ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮತದಾರರಿಗೆ ಅಭಿನಂದನೆ ಸಲ್ಲಿಸಿದ ದಿನೇಶ್ ಗೂಳಿಗೌಡ ಅವರು, ಪಕ್ಷದ ಕಾರ್ಯಕರ್ತರೊಂದಿಗೆ ಮತ್ತು ಮತದಾರರೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರುತ್ತೇನೆ. ನಿಮ್ಮೆಲ್ಲ ಸಮಸ್ಯೆಗಳಿಗೆ ಧನಿಯಾಗಿ ನಿಲ್ಲುತ್ತೇನೆ. ಕೊಟ್ಟಿರುವ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಮಳವಳ್ಳಿಗೆ ಭೇಟಿ ನೀಡಿದ ದಿನೇಶ್ ಅವರು, ಈ ಭಾಗದಲ್ಲಿ ಪಕ್ಷದ ಮುಖಂಡರೂ, ಮಾಜಿ ಶಾಸಕರೂ ಆಗಿರುವ ನರೇಂದ್ರ ಸ್ವಾಮಿ ಅವರ ಹಾಗೂ ಇಲ್ಲಿನ ಕಾರ್ಯಕರ್ತರ ಶ್ರಮ ನನ್ನ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದೆ. ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.

 

key words : mandya-denesh-gooli.gowda-congress-mlc