ನಿಖಿಲ್ ಸೋಲು : ಮಂಡ್ಯ ರೈತರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರಾ ಸಿಎಂ ಎಚ್ಡಿಕೆ…!

 

ಮಂಡ್ಯ, ಜೂ.29, 2019 : (www.justkannada.in news) ಜಿಲ್ಲೆಯ ರೈತರು ಬೇಕಾದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸಲಿ ಎಂದು ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನ್ನದಾತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬೆಳೆಗಳಿಗೆ ಕೆ.ಆರ್.ಎಸ್. ನಿಂದ ನೀರು ಹರಿಸುವಂತೆ ಒತ್ತಾಯಿಸಿ ಜಿಲ್ಲೆಯ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ರೈತರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸಲಿ ಎಂದು ಉಡಾಫೆ ಉತ್ತರ ನೀಡಿರುವುದು ಅನ್ನದಾತರ ಅಕ್ರೋಶ ಉಲ್ಭಣಿಸುವಂತೆ ಮಾಡಿದೆ.

ಸಿಎಂ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರಯವ ರೈತಸಂಘ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸುವುದಾದರೆ ಮುಖ್ಯಮಂತ್ರಿ ಏಕೆ ಇರಬೇಕು. ಜಲಾಶಯದಲ್ಲಿ 60 ಅಡಿ ನೀರಿದ್ದಾಗಲೂ ಜಮೀನಿಗೆ ನೀರು ಹರಿಸಿದ ಉದಾಹರಣೆಗಳಿವೆ. ಸದ್ಯ ಜಲಾಶಯದಲ್ಲಿ 79 ಅಡಿ ನೀರಿದೆ. ಇರುವ ನೀರನ್ನು ಬಳಸಿಕೊಳ್ಳದಂತೆ ಪ್ರಾಧಿಕಾರ ಹೇಳಿಲ್ಲ. ನೀರು ಬಳಸಿಕೊಳ್ಳುವ ಕುರಿತು ಪ್ರಾಧಿಕಾರದ ಮುಂದೆ ಪ್ರಸ್ತಾವ ಸಲ್ಲಿಸಿಲ್ಲ. ಜಿಲ್ಲೆಯ ರೈತರು ಅನುಭವಿಸುತ್ತಿರುವ ಸಂಕಷ್ಟ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ಮುಂದುವರೆದು, ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್‌ ಸೋಲಿನ ಸೇಡು ತೀರಿಸುಕೊಳ್ಳುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಅವರೇ ನೀರು ಬಿಡಿಸಿದ್ದಾರೆ. ಆದರೆ ಈಗ ಪ್ರಾಧಿಕಾರದ ಕಡೆ ಬೆರಳು ತೋರಿಸುತ್ತಿದ್ದಾರೆ. ರೈತರ ಮೇಲೆ ದ್ವೇಷ ಸಾಧಿಸುವುದರಲ್ಲಿ ಕುಮಾರಸ್ವಾಮಿ ನಂಬರ್‌ 1, ಅವರಿಗೆ ಪ್ರಶಸ್ತಿ ಕೊಡಬೇಕು. ವಿಧಾನಸೌಧ ಅವರಪ್ಪನ ಮನೆಯ ಆಸ್ತಿಯಲ್ಲ, ಮೂರನೇ ಮಹಡಿಯಲ್ಲಿ ಕತ್ತೆ ಕಾಯಲು ಕುಳಿತಿದ್ದಾರಾ. ವಿಧಾನಸೌಧದಲ್ಲಿ ಕೂರಲು ಯೋಗ್ಯತೆ ಇಲ್ಲದಿದ್ದರೆ ಮರ್ಯಾದೆಯಿಂದ ರಾಜೀನಾಮೆ ನೀಡಲಿ. ಜಿಲ್ಲೆಯ ಎಳೂ ಜನ ಶಾಸಕರು ಅಯೋಗ್ಯರು ಎಂದು ಆಕ್ರೋಶ ವ್ಯಕ್ತಪಡಿಸಿದರು.

key words : mandya-farmers-protest-krs-water