ಪತ್ರಕರ್ತ ನೇಸರ ಕಾರು ಅಪಘಾತ : ಬೆಂಗಳೂರಿನ ರಕ್ಷಿತ್ ವಿರುದ್ಧ ಎಫ್.ಐ.ಆರ್ ದಾಖಲಿಸಿದ ಮಂಡ್ಯ ಗ್ರಾಮಾಂತರ ಪೊಲೀಸರು.

 

ಮಂಡ್ಯ, ಜೂನ್ 21, 2019 (www.justkannada.in): ಗುರುವಾರ ಸಂಜೆ ಸಂಭವಿಸಿದ ಕಾರುಗಳ ಡಿಕ್ಕಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಎಫ್ ಐ ಆರ್ ದಾಖಲು ಮಾಡಿದ್ದಾರೆ.

ಕಾರು ಓಡಿಸುತ್ತಿದ್ದ ಬೆಂಗಳೂರು ಮೂಲದ ರಕ್ಷಿತ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ರಸ್ತೆ ವಿಭಜಕ್ಕೆ ಕಾರು ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಬಂದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ರಕ್ಷಿತ್ , ಕಾರಿನ ಸ್ಟೇರಿಂಗ್ ಲಾಕ್ ಆದ ಕಾರಣ ಈ ಅಪಘಾತ ಸಂಭವಿಸಿದೆ ಎಂದಿದ್ದಾರೆ.

ಘಟನೆ ಹಿನ್ನೆಲೆ :

ಪ್ರಜಾವಾಣಿ ಮೈಸೂರು ಬ್ಯೂರೊ ವರದಿಗಾರ ನೇಸರ ಕಾಡನಕುಪ್ಪೆ, ಮಡದಿ ಹಾಗೂ ಮಗ ಸಂಚರಿಸುತ್ತಿದ್ದ ಕಾರಿಗೆ ಏಕಮುಖ ಸಂಚಾರ ಮಾರ್ಗದಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದು ಜೂ.20 ರ ಸಂಜೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಪತ್ರಕರ್ತ ನೇಸರ ಹಾಗೂ ಕುಟುಂಬ ವರ್ಗ ಗಂಭೀರವಾಗಿ ಗಾಯಗೊಂಡಿದ್ದರು.

ಅಪಘಾತದಲ್ಲಿ ನೇಸರ ಅವರ ಎಡಗಾಲು ಹಾಗೂ ಎದೆ ಭಾಗಕ್ಕೆ ಪೆಟ್ಟಾಗಿದ್ದು ಪತ್ನಿ ಮೇಘನಾ ಅವರಿಗೆ ತಲೆ, ಎಡಕಾಲು ಹಾಗೂ ಸೊಂಟಕ್ಕೆ ಬಲವಾದ ಪೆಟ್ಟಾಗಿತ್ತು. ಮಗುವಿನ ಎಡಕೈಗೆ ಪೆಟ್ಟಾಗಿ ಈ ಮೂವರೂ ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯ ಐಸಿಯುವಿನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಸ್ತೆ ಅಪಘಾತಕ್ಕೆ ಕಾರಣವಾದ ಬೆಂಗಳೂರಿನ ರಕ್ಷಿತ್ ಹಾಗೂ ಆತನ ಜತೆ ಕಾರಿನಲ್ಲಿದ್ದ ನವ್ಯ ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಇವರ ಕಾರಿನ ಏರ್ ಬಲೋನ್ ಒಪನ್ ಆದ ಕಾರಣ ಅಪಘಾತ ಸಂಭವಿಸಿದರು ಹೆಚ್ಚಿನ ಅನಾಹುತವಾಗಿಲ್ಲ. ಆದರೆ ಪತ್ರಕರ್ತ ನೇಸರ ಮತ್ತು ಕುಟುಂಬ ಸಂಚರಿಸುತ್ತಿದ್ದ ಕಾರಿನಲ್ಲಿ ಏರ್ ಬಲೋನ್ ಇಲ್ಲದ ಕಾರಣ ಕಾರಿನಲ್ಲಿದ್ದವರಿಗೆ ತೀವ್ರ ಪೆಟ್ಟಾಗಿದೆ ಎನ್ನಲಾಗಿದೆ.

———

key words : mandya-journalist-car-accident-fir-bangalore-youth