ಮಂಗಳೂರು,ಡಿ,20,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿ ಎರಡು ಬಲಿ ಪಡೆದಿದ್ದು, ಮಂಗಳೂರಿನ ಸದ್ಯದ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಬಸ್ ಗಳ ಮೇಲೆ ಮತ್ತೆ ಕಲ್ಲು ತೂರಾಟ ನಡೆದಿದೆ.
ಉಪ್ಪಿನಂಗಡಿ ಬಳಿ ಬೈಕ್ ನಲ್ಲಿ ಬಂದ ಕೆಲ ಕಿಡಿಗೇಡಿಗಳು ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಧರ್ಮಸ್ಥಳದಿಂದ ಮಡಿಕೇರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಬಸ್ ನ ಗಾಜು ಪುಡಿಪುಡಿಯಾಗಿದೆ.
ಇನ್ನು ಮುಂಜಾನೆ ಎರಡು ಕಡೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಬೆಳ್ತಂಗಡಿ ತಾಲ್ಲೂಕಿನ ಪುಂಜಾಲಕಟ್ಟೆ ವ್ಯಾಪ್ತಿಯಲ್ಲಿ ಮತ್ತು ಪುತ್ತೂರು ತಾಲ್ಲೂಕಿನ ಕುಪ್ಪಟ್ಟಿಯಲ್ಲಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಇನ್ನು ನಿನ್ನೆ ನಡೆದಿರುವ ಘಟನೆ ಬಗ್ಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ನಗರದಲ್ಲಿ ನಿನ್ನೆ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ನಿನ್ನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿಸೆಂಬರ್ 22ರವರೆಗೂ ಕರ್ಫ್ಯೂ ಜಾರಿ ಮಾಡಲಾಗಿದೆ. ಇಡೀ ಜಿಲ್ಲೆಯಲ್ಲಿ ಸಂಚಾರ ವಿರಳವಾಗಿದ್ದು, ಬೂದಿ ಮುಚ್ಚಿದ ಕೆಂಡದಂತೆ ಕಾಣುತ್ತಿದೆ.
Key words: mangalore- government bus – throw-stone- Citizenship Amendment Act