ಬೆಂಗಳೂರು/ ಶಿವಮೊಗ್ಗ,ಏಪ್ರಿಲ್,24,2025 (www.justkannada.in): ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಕರ್ನಾಟಕದ ಬೆಂಗಳೂರಿನ ಭರತ್ ಭೂಷಣ್ ಮತ್ತು ಶಿವಮೊಗ್ಗದ ಮಂಜುನಾಥ್ ಅವರ ಅಂತ್ಯಕ್ರಿಯೆ ಇಂದು ನೆರವೇರಿತು.
ಶಿವಮೊಗ್ಗ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಅವರ ಅಂತ್ಯಕ್ರಿಯೆ ಇಂದು ಶಿವಮೊಗ್ಗ ನಗರದ ತುಂಗಾ ನದಿ ತಟದಲ್ಲಿರುವ ರೋಟರಿ ಚಿತಾಗಾರದಲ್ಲಿ ನೆರವೇರಿತು. ಬೆಂಗಳೂರು ಮೂಲದ ಭರತ್ ಭೂಷಣ್ ಅವರ ಅಂತ್ಯಕ್ರಿಯೆ ಬೆಂಗಳೂರಿನ ಹೆಬ್ಬಾಳ ಚಿತಾಗಾರದಲ್ಲಿ ನೆರವೇರಿತು.ಒಕ್ಕಲಿಗ ಸಂಪ್ರದಾಯದಂತೆ ಭರತ್ ಭೂಷಣ್ ಅವರ ಅಂತಿಮ ವಿಧಿ ವಿಧಾನ ನಡೆಯಿತು.
ಅಂತ್ಯ ಸಂಸ್ಕಾರದಲ್ಲಿ ಸಚಿವ ರಾಮಲಿಂಗರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಶಿವಮೊಗ್ಗದಲ್ಲಿ ಮಂಜುನಾಥ್ ಅಂತ್ಯಕ್ರಿಯೆ
ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ ರಾವ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ತುಂಗಾ ನದಿ ದಂಡೆಯಲ್ಲಿರುವ ರೋಟರಿ ಚಿತಾಗಾರದಲ್ಲಿ ನೆರವೇರಿತು. ಇದಕ್ಕೂ ಮುನ್ನ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಿದರು. ನಂತರ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ವಿಧಿವಿಧಾನಗಳು ನೆರವೇರಿದವು.
ಅಂತ್ಯಕ್ರಿಯೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಲ್ಕೀಶ್ ಬಾನು ಹಲವರು ಉಪಸ್ಥಿತರಿದ್ದರು.
Key words: Pahalgam terrorist attack, Manjunath, Bharat Bhushan, Funeral