ಬೆಂಗಳೂರು, ಏಪ್ರಿಲ್ 10, 2020 (www.justkannada.in): ಕೊವಿಡ್ 19 ವ್ಯಾಪಕವಾಗಿರುವ ಸಂದರ್ಭದಲ್ಲಿ ನಮ್ಮ ಹಾಗೂ ಇತರರ ಸುರಕ್ಷತೆಗಾಗಿ ಮಾಸ್ಕ್ ಧರಿಸಿ ಆರೋಗ್ಯಕ್ಕೆ ಒತ್ತು ನೀಡುವ ಹೊಸ ಆಂದೋಲನ ಶುರುವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಸುಬ್ರಹ್ಮಣ್ಯ ನಗರ ಮತ್ತು ಗಾಯತ್ರಿ ನಗರ ವಾರ್ಡ್ಗಳಲ್ಲಿ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ವತಿಯಿಂದ ನೈರ್ಮಲ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಗುರುವಾರ ಪಾಲ್ಗೊಂಡ ಸಚಿವರು ಸುದ್ದಿಗಾರರ ಜತೆ ಮಾತನಾಡಿದರು.
“ಕೆಮ್ಮುವಾಗ, ಸೀನುವಾಗ ವೈರಾಣುಗಳು ಇತರರಿಗೆ ಹರಡುವ ಅಪಾಯ ಹೆಚ್ಚು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವ ಅಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಕೆಲವು ದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ನಮ್ಮ ಹಾಗೂ ಇತರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಾಸ್ಕ್ ಧರಿಸುವ ಆಂದೋಲನ ಆರಂಭವಾಗಿದ್ದು, ಎಲ್ಲರೂ ಕೈ ಜೋಡಿಸಬೇಕು,”ಎಂದು ಮನವಿ ಮಾಡಿದರು.
“ಮೊದಲಿನಿಂದಲೂ ನಮ್ಮಲ್ಲಿ ಟವಲ್ ಅಥವಾ ಸೆರಗಿನಿಂದ ಬಾಯಿ, ಮೂಗು ಮುಚ್ಚಿಕೊಳ್ಳುವ ಅಭ್ಯಾಸ ಇತ್ತು. ನಂತರದ ದಿನಗಳಲ್ಲಿ ಈ ಅಭ್ಯಾಸ ನಿಂತು ಹೋಗಿತ್ತು. ಈಗ ಅದರ ಅವಶ್ಯಕತೆ ಎದುರಾಗಿದೆ. ಎಲ್ಲರೂ ಮಾಸ್ಕ್ ಧರಿಸುವುದನ್ನು ರೂಢಿಮಾಡಿಕೊಳ್ಳಲಿ ಎನ್ನುವ ಉದ್ದೇಶದಿಂದ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ 10 ಸಾವಿರ ಕಿಟ್ಗಳನ್ನು ಒದಗಿಸಿದೆ. ಒಂದು ಪ್ಯಾಕೇಟ್ನಲ್ಲಿ 3 ಮಾಸ್ಕ್, 1 ಸೋಪು ಇರುತ್ತದೆ. ಹಿರಿಯ ನಾಗರಿಕರು ಹಾಗೂ ಅವಶ್ಯಕತೆ ಇರುವವರಿಗೆ ಆದ್ಯತೆ ಮೇರೆಗೆ ಕಿಟ್ ವಿತರಿಸಲಾಗುತ್ತದೆ,”ಎಂದು ವಿವರಿಸಿದರು.