ಬೆಂಗಳೂರು,ಡಿಸೆಂಬರ್,29,2020(www.justkannada.in): ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಸಮಗ್ರ ಮಾಸ್ಟರ್ ಪ್ಲಾನ್ -2035 ಅನ್ನು ರೂಪಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ಬೆಂಗಳೂರು ನಗರದ ಉಸ್ತುವಾರಿಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ಸಂಬಂಧಿತ ಆರಂಭಿಕ ಸಭೆಯು ಮಂಗಳವಾರ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಮೊದಲ ವರ್ಚುವಲ್ ಸಭೆಯಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನದ ತಜ್ಞರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಎಸ್.ಆರ್ ವಿಶ್ವನಾಥ್, ಮುಂದಿನ 20-25 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಘಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ನಗರಾಭಿವೃದ್ಧಿ ಕ್ಷೇತ್ರದಲ್ಲಿ ತಜ್ಞರೆನಿಸಿಕೊಂಡಿರುವವರ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ ಎಂದರು.
ಪ್ರಸ್ತುತ ಸಿಲಿಕಾನ್ ಸಿಟಿ ಬೆಳೆಯುತ್ತಿರುವ ವೇಗವನ್ನು ಗಮನಿಸಿದರೆ ಆತಂಕ ತರುವಂತದ್ದಾಗಿದೆ. ಅಷ್ಟೊಂದು ವೇಗವಾಗಿ ಬೆಳೆಯುತ್ತಿರುವುದರಿಂದ ನಾಗರಿಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಒಂದು ಬಹುದೊಡ್ಡ ಸವಾಲಿನ ಕೆಲಸವಾಗಲಿದೆ ಎಂದರು.
ಬಿಬಿಎಂಪಿ ವ್ಯಾಪ್ತಿ ವಿಸ್ತಾರವಾಗುತ್ತಿದ್ದಂತೆಯೇ ಬೆಂಗಳೂರು ನಗರದ ವ್ಯಾಪ್ತಿಯೂ ಹಿಗ್ಗಲಿದೆ. ಇದರಿಂದ ಬೃಹತ್ ಬೆಂಗಳೂರಿನ ವ್ಯಾಪ್ತಿಗೆ ಹೊಸ ಹೊಸ ಪ್ರದೇಶಗಳು ಸೇರ್ಪಡೆಗೊಳ್ಳುತ್ತವೆ. ಅಂತಹ ಪ್ರದೇಶಗಳಿಗೆ ಸೂಕ್ತವಾದ ಮೂಲಸೌಕರ್ಯಗಳನ್ನು ಒದಗಿಸುವುದು ಬಿಡಿಎ, ಬಿಎಂಆರ್ ಡಿಎ, ಬಿಬಿಎಂಪಿ ಸೇರಿದಂತೆ ಇನ್ನಿತರೆ ಸಂಸ್ಥೆಗಳ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಬಿಡಿಎ ನೇತೃತ್ವದಲ್ಲಿ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಹಿಂದೆ ಹಲವು ಬಾರಿ ಎಲ್ಲರೂ ಸೇರಿ ಒಂದು ಉತ್ತಮವಾದ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದ್ದರೂ ಅದರ ಜಾರಿಯಲ್ಲಿ ಹಿಂದೆ ಬಿದ್ದಿದ್ದೇವೆ. ಈ ಕಾರಣದಿಂದಾಗಿಯೇ ಅವೈಜ್ಞಾನಿಕ ರೀತಿಯ ಬೆಳವಣಿಗೆಯನ್ನು ಕಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ಎಚ್ಚರ ವಹಿಸಿ 2035 ಪ್ಲಾನ್ ಅನ್ನು ಸಿದ್ಧಪಡಿಸಲಾಗುತ್ತಿದೆ.
ಹೊಣೆಗಾರಿಕೆ ನಿಗದಿ
ಇದನ್ನು ಜಾರಿಗೊಳಿಸುವ ತಳಮಟ್ಟದ ಅಧಿಕಾರಿಗಳಿಂದ ಮೇಲ್ಮಟ್ಟದ ಅಧಿಕಾರಿಗಳವರೆಗೆ ಎಲ್ಲರನ್ನೂ ಜವಾಬ್ದಾರರನ್ನಾಗಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ. ಯಾವುದೇ ಲೋಪವಾದರೂ ಅವರನ್ನು ಜವಾಬ್ದಾರರನ್ನಾಗಿಸುವ ಕಠಿಣ ಕಾನೂನನ್ನು ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಕೆರೆ, ಉದ್ಯಾನ, ಪರಿಸರ ಸಂರಕ್ಷಣೆಗೆ ಆದ್ಯತೆ
ಮಾಸ್ಟರ್ ಪ್ಲಾನ್ 2035 ರಲ್ಲಿ ಕೆರೆ, ಉದ್ಯಾನ, ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕೆರೆಗಳ ಪುನರುಜ್ಜೀವನಕ್ಕೆ ಕಾಲಮಿತಿ ನಿಗದಿ, ಪ್ರಸ್ತುತ ಇರುವ ಉದ್ಯಾನಗಳನ್ನು ಒತ್ತುವರಿಯಿಂದ ಮುಕ್ತಗೊಳಿಸುವುದು, ಹಸಿರು ಬೆಳೆಸುವುದು ಸೇರಿದಂತೆ ಇನ್ನಿತರೆ ಪರಿಸರ ಸ್ನೇಹಿ ಕ್ರಮಗಳನ್ನು ಈ ಪ್ಲಾನ್ ನಲ್ಲಿ ಅಳವಡಿಸಲಾಗುತ್ತದೆ ಎಂದರು.
ನಗರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅಷ್ಟ ದಿಕ್ಕುಗಳ ಅಭಿವೃದ್ಧಿಗೂ ಒತ್ತು ನೀಡಲಾಗುತ್ತದೆ. ಎಲ್ಲಾ ದಿಕ್ಕುಗಳಲ್ಲಿಯೂ ಸಾರ್ವಜನಿಕರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಸಂಘಸಂಸ್ಥೆಗಳಿಂದ ಸಲಹೆ ಸೂಚನೆ ಸಂಗ್ರಹ
ಮಾಸ್ಟರ್ ಪ್ಲಾನ್ ಅನ್ನು ಸಮಗ್ರವಾಗಿಸುವ ನಿಟ್ಟಿನಲ್ಲಿ ಸಂಘಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ನಾಗರಿಕ ಸಂಸ್ಥೆಗಳು ಸೇರಿದಂತೆ ಇನ್ನಿತರೆ ಕ್ಷೇತ್ರಗಳ ಪರಿಣಿತರಿಂದ ಅಗತ್ಯ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
ಬಿಡಿಎ ಆಯುಕ್ತರಾದ ಡಾ.ಮಹದೇವ್ ಅವರು ಮಾತನಾಡಿ, ನಗರಾಭಿವೃದ್ಧಿಯಲ್ಲಿ ಪರಿಣಿತಿ ಹೊಂದಿರುವ ತಜ್ಞರು ನೀಡುವ ಸಲಹೆ ಸೂಚನೆಗಳನ್ನು ಮಾಸ್ಟರ್ ಪ್ಲಾನ್ ನಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. ಈ ಮೂಲಕ ಒಂದು ದೂರದೃಷ್ಟಿಯುಳ್ಳ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಿದರು.
ಈ ವರ್ಚುವಲ್ ಸಂವಾದದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನದ ವಿವಿಧ ಕ್ಷೇತ್ರಗಳ ಪರಿಣಿತರಾದ ಹರೀಶ್, ಸ್ನೇಹ ನಂದಿಹಾಳ್, ಸ್ಮಿತಾ ಸಿಂಗ್, ಬೃಂದಾಶಾಸ್ತ್ರಿ, ವಿಶ್ವನಾಥ್, ಮೀನಾಕ್ಷಿ ಪ್ರಭು, ಡಾ.ಚಂಪಕ ರಾಜಗೋಪಾಲ್, ಐಐಎಸ್ಸಿಯ ಪ್ರೊಫೆಸರ್ ಆಶಿಶ್ ವರ್ಮಾ, ನಿತಿನ್ ಶೇಷಾದ್ರಿ, ರವೀಂದ್ರ ಶ್ರೀನಿವಾಸ್ ಮತ್ತು ಬಿಡಿಎ ಕಾರ್ಯದರ್ಶಿ ವಾಸಂತಿ ಅಮರ್ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.
Key words: Master Plan 2035 – Integrated- Development -Bangalore City-BDA President -SR Vishwanath.