ಮೈಸೂರು,ಅಕ್ಟೋಬರ್,21,2020(www.justkannada.in): ಮಂಡ್ಯ ಜಿಲ್ಲೆ ರಾಜ್ಯಕ್ಕೆ ಅತಿರಥ ರಾಜಕಾರಣಿಗಳನ್ನು ನೀಡಿದೆ. ಇಡೀ ದೇಶದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜಯಲಲಿತಾ ಮಂಡ್ಯದವರು. ಮಂಡ್ಯ ಲೋಕಸಭಾ ಚುನಾವಣೆ ಸತ್ತ ಅಂಬರೀಶನನ್ನು ಸಶಕ್ತ ಅಂಬರೀಶನನ್ನಾಗಿ ಮಾಡಿದ್ದು ಇದೇ ಚುನಾವಣೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ಎಂಎಲ್ ಸಿ ಹೆಚ್.ವಿಶ್ವನಾಥ್ ‘ಮತಭಿಕ್ಷೆ’ ಕೃತಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಹೆಚ್.ವಿಶ್ವನಾಥ್, ಜಗತ್ತಿನ ಅತ್ಯಂತ ಎತ್ತರದ ಪ್ರಜಾಪ್ರಭುತ್ವವನ್ನು ಎತ್ತಿ, ಅಪ್ಪಿ, ಒಪ್ಪಿರುವ ದೇಶ ನಮ್ಮದು. ನಮ್ಮಲ್ಲಿ ಶಿಷ್ಟ ಸಾಹಿತ್ಯ, ಶಿಶು ಸಾಹಿತ್ಯ, ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಶರಣ ಸಾಹಿತ್ಯ ಇದೆ ಆದರೆ ರಾಜಕೀಯ ಸಾಹಿತ್ಯವಿರಲಿಲ್ಲ. ರಾಜಕಾರಣಿಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳನ್ನು ದೂರವಿಡಿ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಮಂಡ್ಯ ಜಿಲ್ಲೆ ರಾಜ್ಯಕ್ಕೆ ಅತಿರಥ ರಾಜಕಾರಣಿಗಳನ್ನು ನೀಡಿದೆ. ಇಡೀ ದೇಶದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜಯಲಲಿತಾ ಮಂಡ್ಯದವರು. ಮಂಡ್ಯ ಲೋಕಸಭಾ ಚುನಾವಣೆ ಸತ್ತ ಅಂಬರೀಶರನ್ನು ಸಶಕ್ತ ಅಂಬರೀಶರನ್ನಾಗಿ ಮಾಡಿದ್ದು ಇದೇ ಚುನಾವಣೆ. ಚುನಾವಣಾ ಸಂದರ್ಭದಲ್ಲಿ ಕೆಲ ನಾಯಕರ ಹೇಳಿಕೆಗಳು ಸುಮಲತಾ ಎಂಬ ಹೆಣ್ಣು ಮಗಳನ್ನು ಇಡೀ ದೇಶಕ್ಕೆ ಪರಿಚಯಿಸಿತು ಎಂದು ನುಡಿದರು.
ಏನಾದರೂ ಹೇಳಿದರೆ ವಿಶ್ವನಾಥ್ ಒಬ್ಬ ವಿವಾದಾತ್ಮಕ ವ್ಯಕ್ತಿ…
ಕೆಲವರು ವಿಶ್ವನಾಥ್ ನನ್ನು ಅವಹೇಳನ ಮಾಡಿದರು. ವಿಶ್ವನಾಥ್ ಗೇಕೆ ಸಾಹಿತ್ಯ ಕೋಟಾದಡಿ ಎಂಎಲ್ಸಿ ಸ್ಥಾನ ನೀಡಿದ್ದಾರೆ ಎಂದು ಕೆಲವರು ಜರಿದರು. ನಾನೇನು ಕಾಗಕ್ಕ ಗೂಬಕ್ಕ ಕಥೆ ಬರೆದಿಲ್ಲ. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಇಟ್ಟುಕೊಂಡೇ ನಾನು ಮತಸಂತೆ ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿರುವುದು. ಏನಾದರೂ ಹೇಳಿದರೆ ವಿಶ್ವನಾಥ್ ಒಬ್ಬ ವಿವಾದಾತ್ಮಕ ವ್ಯಕ್ತಿ ಎಂದು ಹೆಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ಕನ್ನಡಕ್ಕೊಂದು ಸಚಿವಾಲಯ ಇರಲಿಲ್ಲ ಕೇವಲ ನಿರ್ದೇಶನಾಲಯವಿತ್ತು. ಇದ್ಯಾವುದಕ್ಕೂ ಆಗಿನ ಸಾಹಿತಿಗಳು ತಲೆಕೆಡಿಸಿಕೊಂಡಿರಲಿಲ್ಲ. ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.
ಧಂ ಇದ್ಯಾ ಅವನಿಗೆ, ಗೊತ್ತಿಲ್ವಾ ನೀನು ಕಡಿದದ್ದು…. ಇವೆಲ್ಲಾ ರಾಜಕೀಯ ಭಾಷೆನಾ? ಎಂದು ಪ್ರಶ್ನಿಸಿದ ಹೆಚ್.ವಿಶ್ವನಾಥ್, ರಾಜಕಾರಣಿ ಇಂತಹ ಭಾಷೆನಾ ಬಿಡಬೇಕು. ಇದನ್ನು ನಾನು ಹೇಳಿದ್ರೆ ನಾನು ವಿವಾದಾತ್ಮಕ ವ್ಯಕ್ತಿ ಅಂತಾರೆ. ರಾಜಕಾರಣಿಗಳನ್ನ ಶಿಕ್ಷಣದಲ್ಲಿ ಬಳಸಿಕೊಳ್ಳುತ್ತಿಲ್ಲ. ಎಲ್ಲಾ ಸಾಹಿತ್ಯಕ್ಕು ಬೆಲೆ ಕೊಡುತ್ತಾರೆ. ಆದರೆ ರಾಜಕೀಯ ಸಾಹಿತ್ಯವನ್ನು ಕಡೆಗಣಿಸಲಾಗುತ್ತಿದೆ. ದೇಶಕ್ಕೆ ರಾಜಕೀಯ ಅಕಾಡೆಮಿ ಬೇಕು. ರಾಜಕಾರಣಿಗಳಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಿಸಬೇಕು. ಪತ್ರಿಕೋದ್ಯಮ ವಿಭಾಗದಲ್ಲೂ ರಾಜಕಾರಣಿಗಳನ್ನು ಪರಿಗಣಿಸುತ್ತಿಲ್ಲ ಎಂದು ವಿಶ್ವನಾಥ್ ತಿಳಿಸಿದರು.
Key words: mathabeekshe-book release-election – Amabarish-mandya lokasabha –election-MLC-H. VISHWANATH.