ಮೈಸೂರು,ಮೇ,15,2019(www.justkannada.in): ಸಾರ್ವಜನಿಕ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್ ಶಾಸಕ ರಾಮದಾಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಮೈಸೂರು ಮಹಾನಗರ ಪಾಲಿಕೆ ಎದುರು ಸಾಮೂಹಿಕ ಪ್ರತಿಭಟನೆ ನಡೆಯುತ್ತಿತ್ತು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರಿಗೆ ಶಾಸಕ ರಾಮದಾಸ್ ಸಮಸ್ಯೆಗಳ ಬಗೆ ವಿವರಣೆ ನೀಡಿದರು. ಕೂಡಲೇ ಸಮಸ್ಯೆಗಳನ್ನ ಬಗೆಹರಿಸುವಂತೆ ಎಸ್.ಎ.ರಾಮದಾಸ್ ಮೇಯರ್ ಗೆ ಮನವಿ ಪತ್ರ ನೀಡಿದರು. ಶಾಸಕ ರಾಮದಾಸ್ ಗೆ ಶಾಸಕ ಎಲ್.ನಾಗೇಂದ್ರ ಸಾಥ್ ನೀಡಿದರು.
ಮನವಿ ಸ್ವೀಕರಿಸಿದ ಬಳಿಕ ಶಾಸಕ ಎಸ್.ಎ.ರಾಮದಾಸ್ ವಿರುದ್ಧ ವಾಗ್ದಾಳಿ ನಡೆಸಿದ ಮೇಯರ್ ಪುಷ್ಪಲತಾ ಜಗನ್ನಾಥ್, ರಾಮದಾಸ್ ರವರು ಪ್ರಚಾರಕ್ಕಾಗಿ ಬೀದಿಯಲ್ಲಿ ಕುಳಿತುಕೊಳ್ಳುವ ಅವಶ್ಯಕತೆ ಇರಲಿಲ್ಲ. ಇವರು ಬೇಕಾದ್ರೆ ವಿಧಾನ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಧ್ವನಿ ಮಾಡಬಹುದಿತ್ತು. ಅಷ್ಟೆ ಅಲ್ಲದೆ ಅವರು ಕೌನ್ಸಿಲ್ ನ ಸದಸ್ಯರು. ಅವರು ಕೌನ್ಸಿಲ್ ಸಭೆಯಲ್ಲೂ ಸಹ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಬಹುದಿತ್ತು. ಆದರೆ ನಾನು ಬಂದಾಗಿನಿಂದಲೂ ಅವರು ಒಂದು ಕೌನ್ಸಿಲ್ ಸಭೆಗೂ ಬಂದಿಲ್ಲ ಎಂದು ಆರೋಪಿಸಿದರು.
ನಾವು ಸುಮ್ಮನೆ ಕುಳಿತಿಲ್ಲ. ಪ್ರತಿಯೊಂದು ಸಮಸ್ಯೆಗಳನ್ನ ಬಗೆ ಹರಿಸಲು ಮುಂದಾಗಿದ್ದೇವೆ. ನಮಗೆ ಸಮಸ್ಯೆ ಬಗೆಹರಿಸುವ ವೇಳೆ ಸ್ವಚ್ಛ ಸರ್ವೇಕ್ಷಣೆ ಬಂತು. ಅಷ್ಟೆ ಅಲ್ಲದೆ ಚುನಾವಣೆ ನೀತಿ ಸಂಹಿತೆ ಸಹ ಇದೆ. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸುತ್ತೇವೆ ಎಂದು ಮೇಯರ್ ಪುಷ್ಬಲತಾ ಜಗನ್ನಾಥ್ ಭರವಸೆ ನೀಡಿದರು.
Key words: Mayor-Pushpalatha Jagannath -outrage –against- legislator- SA Ramdas.