ಬೆಂಗಳೂರು,ನವೆಂಬರ್,11,2020(www.justkannada.in) : ರಾಜ್ಯದಲ್ಲಿ ದೌರ್ಜನ್ಯ ಪ್ರತಿಬಂಧ ಅಧಿನಿಯಮದಡಿಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕೇವಲ ಶೇ. 5 ರಿಂದ 6 ರಷ್ಟಿವೆ. ಶಿಕ್ಷೆಯ ಪ್ರಮಾಣ ಹೆಚ್ಚಿಸಲು ವ್ಯಾಜ್ಯ ಮತ್ತು ಅಭಿಯೋಗ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು.
ಇಂದು ಸಮಾಜ ಕಲ್ಯಾಣ ಇಲಾಖೆಯು ದೌರ್ಜನ್ಯ ಪ್ರತಿಬಂಧ ಅಧಿನಿಯಮದಡಿ ಏರ್ಪಡಿಸಿದ್ದ ರಾಜ್ಯಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಎಲ್ಲಾ ಪೊಲೀಸ್ ಅಧಿಕಾರಿಗಳು ದೌರ್ಜನ್ಯ ಪ್ರಕರಣಗಳಲ್ಲಿ ಎಫ್.ಐ.ಆರ್. ದಾಖಲಿಸಬೇಕು ಮತ್ತು ಸಂಬಂಧಿಸಿದ ಸೆಕ್ಷನ್ ಗಳನ್ನು ಅನುಮೋದಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳಿಂದ 60 ದಿನಗಳೊಳಗೆ ತನಿಖೆ ಮುಗಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಬಗ್ಗೆ ಕ್ರಮವಹಿಸಲು ಮತ್ತು ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ಜಾಗರೂಕತೆ ವಹಿಸಬೇಕು. ಅಲ್ಲದೇ ಸಾಕ್ಷಿದಾರರು ಮತ್ತು ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ದೂರು ಸಲ್ಲಿಸುವ ಸಂದರ್ಭವನ್ನೂ ವಿಡಿಯೋ ರೆಕಾರ್ಡಿಂಗ್ ಮಾಡಲು ಕ್ರಮ ವಹಿಸುವಂತೆ ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿಗಳು ಸೂಚಿಸಿದರು.
ದೂರು ನೀಡಲು ಬಂದ ಸಂತ್ರಸ್ತರ ಹಾದಿ ತಪ್ಪಿಸುವ ಸಾಧ್ಯತೆಗಳ ತಪ್ಪಿಸಲು ವಿಡಿಯೋ ರೆಕಾರ್ಡಿಂಗ್
ಪ್ರಸ್ತುತ ದೌರ್ಜನ್ಯ ಪ್ರತಿಬಂಧ ಅಧಿನಿಯಮದ ಅಡಿ ದಾಖಲಾಗುವ ಪ್ರಕರಣಗಳಲ್ಲಿ ಪಂಚನಾಮೆ ಮತ್ತು ಸಾಕ್ಷಿಗಳ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ವಿಡಿಯೋ ರೆಕಾರ್ಡಿಂಗ್ ನಡೆಸಲಾಗುತ್ತಿದೆ. ದೂರು ಸಲ್ಲಿಸಲು ಬಂದ ಸಂತ್ರಸ್ತರ ಹಾದಿ ತಪ್ಪಿಸುವ ಸಾಧ್ಯತೆಗಳನ್ನು ತಪ್ಪಿಸಲು ದೂರು ನೀಡುವ ಸಂದರ್ಭದಲ್ಲಿಯೂ ವಿಡಿಯೋ ರೆಕಾರ್ಡಿಂಗ್ ನಡೆಸುವಂತೆ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡುವಂತೆ ಮುಖ್ಯಮಂತ್ರಿಗಳು ತಿಳಿಸಿದರು.
100 ಪಡಿತರ ಚೀಟಿದಾರರು ಇದ್ದಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪಿಸಿ
ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳಲ್ಲಿ, ತಾಂಡಾ ಗಳಲ್ಲಿ ಕನಿಷ್ಠ 100 ಪಡಿತರ ಚೀಟಿದಾರರು ಇದ್ದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಸೂಚಿಸಿದರು.
ದೌರ್ಜನ್ಯಕ್ಕೆ ಒಳಪಟ್ಟ ಸಂತ್ರಸ್ತರಿಗೆ ನಿಯಮಾನುಸಾರ ಪರಿಹಾರ ಧನವನ್ನು ನೀಡಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ 30 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದ್ದು, ಈ ಪೈಕಿ 15 ಕೋಟಿ ರೂ.ಗಳ ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ದೌರ್ಜನ್ಯಕ್ಕೆ ಒಳಗಾದವರಿಗೆ ನಿಗದಿತ ಸಮಯದೊಳಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದಲ್ಲದೆ ಭಾರತ ಸರ್ಕಾರದ ಡಾ. ಅಂಬೇಡ್ಕರ್ ಫೌಂಡೇಷನ್ ವತಿಯಿಂದ ನೀಡಲಾಗುವ ಪರಿಹಾರ ಒದಗಿಸಲು ಸಹ ಅಧಿಕಾರಿಗಳು ಕ್ರಮ ವಹಿಸಬೇಕು. ಸಂತ್ರಸ್ತರಿಗೆ ಉದ್ಯೋಗ ನೀಡುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಗಳಿಗೆ ತಿರಸ್ಕರಿಸದಿರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮತ್ತು ಉಪ ವಿಭಾಗೀಯ ಮಟ್ಟದಲ್ಲಿ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಆಯುಕ್ತರು ಕಡ್ಡಾಯವಾಗಿ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸುವಂತೆಯೂ ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಸಮಿತಿಯ ಸದಸ್ಯರಾದ ಸಂಸದರು, ಶಾಸಕರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
English summary…
CM BSY proposes measures to increase prosecutions under The SC & STs (Prevention of Atrocities) Act:
Bengaluru, Nov. 11, 2020 (www.justkannada.in): Chief Minister B. S. Yedyurappa today instructed the Department of Prosecutions and Government Litigations and Police Department officials to focus on increasing the prosecution percentage under the SC & STs (Prevention of Atrocities) Act, which is presently only 5% to 6%.
He was addressing the State-level Awareness and Monitoring Meeting organized by the Social Welfare Department held in Bengaluru today. He called upon the police officials to register FIRs under the atrocities act and appropriate sections. He also instructed to complete the investigations under this act within 60 days and submit chargesheet to the court strictly and also take measures to provide suitable protection to the witnesses and victims.
key words : Measures-increase-sentence-under-Violence- Prevention-Act-CM BSY-NOTICE