ಬೆಂಗಳೂರು,ನವೆಂಬರ್,16,2022(www.justkannada.in): ತಂತ್ರಜ್ಞಾನ ಯುಗದಲ್ಲಿ ಮಾಧ್ಯಮಗಳು ಇನ್ನಷ್ಟು ರೂಪಾಂತರಗೊಳ್ಳಲಿದ್ದು, ಭವಿಷ್ಯದಲ್ಲಿ ಉಜ್ವಲವಾದ ಭವಿಷ್ಯ ಇದೆ ಎಂದು ಹಿರಿಯ ಪತ್ರಕರ್ತ ಅನಂತ ಚಿನಿವಾರ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಆರ್. ಶ್ರೀಶ ಮತ್ತು ಜಿ.ಎಂ. ಶಿರಹಟ್ಟಿ ಅವರ ಅಭಿನಂದಿಸಿ ಮಾತನಾಡಿದರು.
ಮಾಧ್ಯಮಗಳು ಇಂದು ವಿವಿಧ ಆಯಾಮವನ್ನು ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ಉಜ್ವಲ ಅವಕಾಶವಿದ್ದು, ಎಲ್ಲಾ ಪತ್ರಕರ್ತರೂ ಬದಲಾಗುವ ಪರಿಸ್ಥಿತಿಗೆ ತಕ್ಕಂತೆ ಕಾರ್ಯನಿರ್ವಹಿಸುವ ಅಗತ್ಯವೂ ಇದೆ. ಸಮಾಜ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಮಾಧ್ಯಮ ಮತ್ತು ಪತ್ರಕರ್ತರು ಆಗಾಗ ಆತ್ಮವಿಮರ್ಶೆಗೆ ಒಳಪಡಬೇಕು ಎಂದರು.
ಕೆಯುಡಬ್ಲ್ಯೂಜೆ ಸಂಘಟನೆಗೆ ಹೊಸ ರೂಪ ತಂದುಕೊಟ್ಟಿರುವ ಶಿವಾನಂದ ತಗಡೂರು ಅವರ ನೇತೃತ್ವದ ತಂಡ ಉತ್ತಮ ಕೆಲಸ ಮಾಡುತ್ತಿದೆ. ಇದೇ ರೀತಿಯಲ್ಲಿ ಎಲ್ಲಾ ಕಡೆಯಲ್ಲಿ ಒಳಗಿನಿಂದಲೇ ಸ್ವಚ್ಚತಾ ಕಾರ್ಯ ಮಾಡಿಬೇಕು. ಆಗ ಮಾತ್ರ ಸಾರ್ವಜನಿಕ ವಿಶ್ವಾಸ ಗಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, 1966 ರಲ್ಲಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಅಸ್ತಿತ್ವಕ್ಕೆ ಬಂದ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುತ್ತಿರುವುದಕ್ಕೆ ಸಂಘ ಹೆಮ್ಮೆ ಪಡುತ್ತಿದೆ ಎಂದರು.
ಅಭಿನಂದನಾ ಭಾಷಣ ಮಾಡಿದ ಐ.ಎಫ್.ಡಬ್ಲ್ಯೂ.ಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಪತ್ರಕರ್ತರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಖಂಡಿತವಾಗಿಯೂ ಗೌರವ-ಪುರಸ್ಕಾರಗಳು ಹುಡುಕಿ ಬರಲಿದೆ ಎಂಬುದಕ್ಕೆ ಶ್ರೀಶ ಮತ್ತು ಶಿರಹಟ್ಡಿಯವರು ಉದಾಹರಣೆ ಎಂದು ತಿಳಿಸಿದರು.
ಸಂಘದ ಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಎಚ್.ಆರ್. ಶ್ರೀಶ ಮಾತನಾಡಿ, ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿದೆ. ಎಲ್ಲಾ ಸವಾಲುಗಳ ಎದುರು ಮುದ್ರಣ ಮಾಧ್ಯಮ ಉಳಿದು ಬೆಳೆದಿದೆ. ಅದು ಎಂದೆಂದೂ ತನ್ನ ಮೊನಚನ್ನು ಕಾಯ್ದುಕೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇನ್ನೋರ್ವ ಪ್ರಶಸ್ತಿ ಪುರಸ್ಕೃತರಾದ ಶಿರಹಟ್ಟಿಯವರು ಮಾತನಾಡಿ, ಪತ್ರಿಕೋದ್ಯಮದಲ್ಲಿ ಸ್ವಾತಂತ್ರ್ಯದ ಮಿತಿಯನ್ನು ಎಲ್ಲಾ ಪತ್ರಕರ್ತರೂ ಅರಿತುಕೊಳ್ಳಬೇಕು. ಸ್ವಯಂ ನಿರ್ಬಂಧ ಹಾಕಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಲು ಬದ್ದತೆ ತೋರಿಸಬೇಕು ಎಂದು ಕರೆ ನೀಡಿದರು.
ಕೆಯುಡಬ್ಲ್ಯೂಜೆ ನಮ್ಮ ಹಿರಿತನವನ್ನು ಗುರುತಿಸಿ ಅಭಿನಂದಿಸಿದನ್ನು ಮರೆಯಲಾಗದು ಎಂದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಶುಭ ಹಾರೈಸಿದರು.
ಸುದ್ದಿಮೂಲ ಪತ್ರಿಕೆ ಸಂಪಾದಕ ಬಸವರಾಜ ಸ್ವಾಮಿ, ರಾಜ್ಯ ಸಮಿತಿ ಸದಸ್ಯರಾದ ಎಚ್.ಬಿ.ಮದನಗೌಡ, ರವಿಕುಮಾರ್ ಟೆಲೆಕ್ಸ್, ಮುನಿರಾಜು, ದೇವರಾಜು, ನಗರ ಘಟಕ ಅಧ್ಯಕ್ಷ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರಿಕಟ್, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ಸಂಘದ ವಿವಿಧ ಜಿಲ್ಲೆಯ ಪದಾಧಿಕಾರಿಗಳು, ರಾಜ್ಯ ಸಮಿತಿ ಸದಸ್ಯರೂ, ಬೆಂಗಳೂರು ನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
Key words: Media – bright future – age –technology- Senior Journalist -Ananta Chiniwara