ಕೋವಿಡ್–19 ಪಿಡುಗು ನಿರ್ವಹಣೆ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ
ಮಂಗಳೂರು: ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಸಾಂಸ್ಥಿಕ ಆವಿಷ್ಕಾರ ಸಮಿತಿಯು ನಿಟ್ಟೆ ಸಂವಹನ ಸಂಸ್ಥೆಯ ಸಹಯೋಗದಲ್ಲಿ ಕೋವಿಡ್–19 ಪಿಡುಗು ನಿರ್ವಹಣೆ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ‘ಮಣಿಪಾಲ್ ಯೂನಿವರ್ಸಲ್ ಪ್ರೆಸ್’ನ ಹಿರಿಯ ಪತ್ರಕರ್ತ ಪೃಥ್ವೀರಾಜ ಕವತ್ತೂರು, ‘ದೈಜಿ ವರ್ಲ್ಡ್’ ಸಂಸ್ಥೆಯ ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆ, ‘ನಮ್ಮ ಕುಡ್ಲ’ ಸಂಸ್ಥೆಯ ಪ್ರಚಲಿತ ವಿದ್ಯಮಾನ ವಿಭಾಗದ ನಿರ್ವಾಹಕ ನಿತಿನ್ ಸಾಲಿಯಾನ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ಈಚಿನ ದಿನಗಳಲ್ಲಿ ಮಾಹಿತಿ ಪಿಡುಗು ನಮ್ಮನ್ನು ಕಾಡಲು ಶುರುಮಾಡಿದೆ. ನಿಖರವಾದ, ನಿಷ್ಪಕ್ಷಪಾತವಾದ ಮಾಹಿತಿಯನ್ನು ಪಡೆಯುವಲ್ಲಿ ಗೊಂದಲ ಉಂಟಾಗಿದೆ. ಈ ವಿಚಾರಗಳನ್ನು ಮಾಧ್ಯಮಗಳು ಅವಲೋಕನ ಮಾಡಬೇಕು. ಮಾಹಿತಿ ಪಿಡುಗಿನಿಂದಾಗಿ ಜನಸಾಮಾನ್ಯರು ದಾರಿ ತಪ್ಪುವಂತೆ ಆಗುತ್ತಿದೆ. ನಿಖರವಾದ ಸುದ್ದಿ ಮೂಲಗಳನ್ನು ಆಧರಿಸಿ ಸುದ್ದಿಯನ್ನು ಪ್ರಕಟಿಸಬೇಕು ಎಂದು ಅಭಿಪ್ರಾಯಪಟ್ಟರು.
ಕೋವಿಡ್–19 ಪಿಡುಗಿನಂತಹ ಸಂಕಷ್ಟದ ಸಮಯದಲ್ಲೂ ಅನೇಕ ಮಾಧ್ಯಮ ಸಂಸ್ಥೆಗಳು ಚಂದಾ ಹಣವನ್ನು ಪಡೆದುಕೊಳ್ಳದೇ ದೊಡ್ಡ ಸೇವೆಯನ್ನು ಮಾಡಿವೆ. ಇದನ್ನು ನಾವು ಸ್ಮರಿಸಬೇಕು. ಪತ್ರಕರ್ತರು ಪ್ರಾಣವನ್ನೂ ಲೆಕ್ಕಿಸದೇ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಐಸಿಎಸ್ಎಸ್ಆರ್ ಹಿರಿಯ ಫೆಲೊ ಪ್ರೊ.ಎನ್.ಉಷಾರಾಣಿ ಮಾತನಾಡಿ, ಮಾಹಿತಿ ಪಿಡುಗು ಕೋವಿಡ್ ಪಿಡುಗಿಗಿಂತಾ ಭಯಾನಕವಾಗಿದೆ. ಸರಿ ಮಾಹಿತಿಯನ್ನು ನೀಡುವ ಹೊಣೆಗಾರಿಕೆ ಪತ್ರಕರ್ತರ ಮೇಲಿರುತ್ತದೆ. ಪತ್ರಕರ್ತರು ವಿಜ್ಞಾನಿಗಳಾಗಬೇಕಿಲ್ಲ. ವಿಜ್ಞಾನಿಗಳನ್ನು ಹೇಳುವುದನ್ನು ಸರಿಯಾಗಿ ಅರ್ಥೈಸಿಕೊಂಡು ಅದನ್ನು ನ್ಯಾಯಯುತವಾಗಿ ಅರ್ಥೈಸುವುದನ್ನು ರೂಢಿಸಿಕೊಳ್ಳಬೇಕಿದೆ ಎಂದರು.
‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅವರು ಮಾತನಾಡಿ, ಕೋವಿಡ್ –19 ಮಾತ್ರವೇ ಅಲ್ಲ, ಎಲ್ಲ ಸಂಕಷ್ಟದ ಸಂದರ್ಭಗಳಲ್ಲೂ ಮಾಧ್ಯಮಗಳು ಗಂಭೀರವಾಗಿ ಕಾರ್ಯನಿರ್ವಹಿಸಿವೆ. ಕೋವಿಡ್ ಶುರುವಾದಾಗ ಪತ್ರಿಕೆಗಳ ಮೂಲಕ ಕೊರೊನಾ ವೈರಸ್ ಸೋಂಕು ಹರಡುತ್ತದೆ ಎಂಬ ವದಂತಿಯನ್ನು ಹಬ್ಬಿಸಲಾಗಿತ್ತು. ಇದರಿಂದ ಓದುಗರು ಪತ್ರಿಕೆಗಳನ್ನು ತರಿಸುವುದನ್ನು ನಿಲ್ಲಿಸಿದರು. ಇದರಿಂದ ಪತ್ರಿಕೆಗಳಿಗೆ ಅತೀವ ನಷ್ಟವಾಯಿತು. ಆದರೂ ಪತ್ರಿಕೆಗಳು ತಲೆ ಎತ್ತಿ ನಿಂತಿವೆ ಎಂದರು.
ಈಗ ಜನಸಾಮಾನ್ಯರೂ ಪತ್ರಕರ್ತರೇ ಆಗಿದ್ದಾರೆ. ಸ್ಮಾರ್ಟ್ ಫೋನ್ ಇರುವ ಎಲ್ಲರೂ ಪತ್ರಕರ್ತರಂತೆ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ, ಪತ್ರಕರ್ತರಿಗೂ ಜನಸಾಮಾನ್ಯರ ನಡುವೆ ವ್ಯತ್ಯಾಸ ಕಂಡುಹಿಡಿಯುವುದೇ ಕಷ್ಟವಾಗಿದೆ ಎಂದರು.
‘ಡೈಜಿ ವರ್ಲ್ಡ್’ ಸಂಸ್ಥೆಯ ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆ ಮಾತನಾಡಿ, ನಮ್ಮ ಸಂಸ್ಥೆಯ ಮೂಲಕ ಕೋವಿಡ್ ಗೆದ್ದವರ ಕಥೆಗಳನ್ನು ಹೇಳಿದೆವು. ಜನರಿಗೆ ಸ್ಫೂರ್ತಿ ತುಂಬಲು ಪ್ರಯತ್ನಿಸಿದೆವು. ದಾನಿಗಳಿಂದ ನೆರವು ಪಡೆದು ಕೋವಿಡ್ ಪೀಡಿತರಿಗೆ ನೀಡಿದೆವು. ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಅರಿವು ಕಾರ್ಯಕ್ರಮಗಳನ್ನು ನಿರ್ಮಿಸಿದೆವು ಎಂದು ತಿಳಿಸಿದರು.
‘ಮಣಿಪಾಲ್ ಯೂನಿವರ್ಸಲ್ ಪ್ರೆಸ್’ನ ಹಿರಿಯ ಪತ್ರಕರ್ತ ಪೃಥ್ವೀರಾಜ ಕವತ್ತೂರು ಮಾತನಾಡಿ, ಸುಳ್ಳು ಸುದ್ದಿಗಳು ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಿಂದ ಬರುತ್ತಿದೆ ಎಂಬ ವಾದವಿದೆ. ಸಾಮಾಜಿಕ ಮಾಧ್ಯಮಗಳನ್ನು ಮಾಧ್ಯಮಗಳ ಸಾಲಿಗೆ ಸೇರಿಸಬೇಕೇ ಬೇಡವೇ ಎಂಬ ಚರ್ಚೆ ನಡೆಯಬೇಕಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನಸಾಮಾನ್ಯರೇ ಬರವಣಿಗೆಯಲ್ಲಿ ತೊಡಗುತ್ತಾರೆ. ಅದರಲ್ಲಿ ಸಂಪಾದನೆಯ ಪಾತ್ರವೇ ಇಲ್ಲದೇ ಇರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರು.
‘ನಮ್ಮ ಕುಡ್ಲ’ ಸಂಸ್ಥೆಯ ಪ್ರಚಲಿತ ವಿದ್ಯಮಾನ ವಿಭಾಗದ ನಿರ್ವಾಹಕ ನಿತಿನ್ ಸಾಲಿಯಾನ್ ಮಾತನಾಡಿ, ನಮಗೆ ಕೊರೊನಾ ಪಾಸಿಟಿವ್ ಬೇಡ. ಪಾಸಿಟಿವ್ ಸುದ್ದಿಗಳು ಬೇಕಿದೆ. ಸಕಾರಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ನಿಟ್ಟೆ ಸಂವಹನ ಸಂಸ್ಥೆಯ ಮುಖ್ಯಸ್ಥ ಪ್ರೊ.ರವಿರಾಜ್ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ.ನೇಸರ ಕಾಡನಕುಪ್ಪೆ ಕಾರ್ಯಕ್ರಮ ನಿರ್ವಹಿಸಿದರು.