ಚಿತ್ರದುರ್ಗ,ಫೆಬ್ರವರಿ,10,2022(www.justkannada.in): ಹಿಜಾಬ್, ಕೇಸರಿ ಮತ್ತು ನೀಲಿ ಶಾಲುಗಳ ಮಧ್ಯೆಯ ಸಂಘರ್ಷದ ಸಂದರ್ಭದಲ್ಲಿ ಮಾಧ್ಯಮಗಳು ಪ್ರಬುದ್ಧತೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಅನಂತ್ ಚಿನಿವಾರ ಅಭಿಪ್ರಾಯ ಪಟ್ಟರು.
ನಗರದ ಕ್ರೀಡಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೇಖಕ ತುರುವನೂರು ಮಂಜುನಾಥ್ ರವರ ಮನಮಿಡಿತ ಕೃತಿ ಲೋಕಾರ್ಪಣೆ ಹಾಗೂ ಕೆಂಧೂಳಿ ವಾರಪತ್ರಿಕೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಬೇಕಾದರೆ ರಾಜಕೀಯ, ಅಧಿಕಾರಿ, ವ್ಯವಸ್ಥೆಯ ನಾಯಕತ್ವ ಬಲಿಷ್ಠವಾಗಿರಬೇಕು. ಇಲ್ಲವಾದರೆ ಎಲ್ಲವೂ ಕೂಡ ಜಾಳು ಜಾಳಾಗಿ ಕಂಡುಬರುತ್ತದೆ. ಸಂಘರ್ಷದ ಸಂದರ್ಭವಾಗಿರುವ ಹಿಜಾಬ್, ಕೇಸರಿ, ನೀಲಿಶಾಲುಗಳ ಹೋರಾಟವನ್ನು ನಿಯಂತ್ರಿಸುವಂತಹ ಶಕ್ತಿ ನಾಡಿನ ಧಾರ್ಮಿಕ ಕೇಂದ್ರಗಳ ಧರ್ಮಗುರುಗಳಿಗೆ ಇದೆ. ಆದರೆ ಇಂತಹ ಪರಿಸ್ಥಿತಿಯನ್ನು ಕಂಡು ಯಾರೊಬ್ಬ ಧಾರ್ಮಿಕ ಗುರುಗಳು ಕೂಡ ಮಾತನಾಡದೆ ಇರುವುದು ಮತ್ತು ಸಾಮಾಜಿಕ ಸಂಘರ್ಷವನ್ನು ತಪ್ಪಿಸಲು ಪ್ರಯತ್ನಿಸದೇ ಇರುವುದು ಶೋಚನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುರುಘಾಮಠದ ಪೀಠಾಧ್ಯಕ್ಷ ಡಾ. ಶಿವಮೂರ್ತಿ ಮುರುಘಾಶರಣರು, ವ್ಯಕ್ತಿ, ಅಭಿವ್ಯಕ್ತಿ, ಸ್ವಾತಂತ್ರ್ಯವನ್ನು ಪ್ರತಿಯೊಬ್ಬರು ರೂಢಿಸಿಕೊಂಡಾಗ ಅತ್ಯುತ್ತಮವಾದ ಸಾಹಿತ್ಯ ಮತ್ತು ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರ ಗಣ್ಯರಾದ ಟಿ.ಕೆ. ಬಸವರಾಜ್, ಕ.ಮ.ರವಿಶಂಕರ್, ಚಳ್ಳಕೆರೆ ರ್ರಿಸ್ವಾಮಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಓ. ಪರಮೇಶ್ವರಪ್ಪ, ಹಂಪಿ ವಿ.ವಿ. ಪ್ರಾಧ್ಯಾಪಕ ಸೋಮಶೇಖರ್, ಡಾ. ಅಲೆಕ್ಸಾಂಡರ್, ಹೆಚ್. ಲಕ್ಷ್ಮಣ್ ಮುಂತಾದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
Key words: media- hijab –conflict-Ananth Chiniwara