ಬೆಂಗಳೂರು,ಅ,9,2019(www.justkannada.in): ನಾಳೆಯಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನ ಚಿತ್ರೀಕರಣಕ್ಕೆ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಡೆಯ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ವ್ಯಂಗ್ಯವಾಡಿದ್ದಾರೆ.
ಇದು ಬಿಜೆಪಿಯವರ ಪ್ರಜಾಪ್ರಭುತ್ವದ ಮೂಲಮಂತ್ರ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಲೇವಡಿ ಮಾಡಿದ್ದಾರೆ.
ಹಿರಿಯ ರಂಗಕರ್ಮಿ ಪ್ರಸನ್ನ ಅವರು ಆರ್ಥಿಕ ನೀತಿ ವಿರೋಧಿಸಿ ಅಮರಣಾಂತ ಉಪವಾಸ ಕೈಗೊಂಡಿದ್ದಾರೆ. ದುಡಿಮೆ ಗೆಲ್ಲಿಸಿ, ಪರಿಸರ ಗೆಲ್ಲಿಸಿ ಎಂದು ಗಾಂಧಿಭವನದ ಬಳಿ ರಂಗಕರ್ಮಿ ಪ್ರಸನ್ನ ಅವರು ಮೌನ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಪ್ರಸನ್ನ ನಾಲ್ಕೈದು ದಿನದಿಂದ ಧರಣಿ ನಡೆಸ್ತಿದ್ದಾರೆ. ಅವರ ಆರೋಗ್ಯ ಕ್ಷೀಣಿಸುತ್ತಿದೆ. ಸರ್ಕಾರ ಇತ್ತ ತಿರುಗಿಯೂ ನೋಡಿಲ್ಲ. ವೈದ್ಯರಿಂದ ಪದೇ ಪದೇ ಚಿಕಿತ್ಸೆ ಕೊಡಿಸಬೇಕು. ಇಂತ ಸರ್ಕಾರವನ್ನ ನಾವು ನೋಡಿಲ್ಲ. ಏನ್ ಹೇಳೋದು ಎಂದು ಕಿಡಿಕಾರಿದರು.
ಇಂತಹ ಹೋರಾಟ ಇಂದು ಅನಿವಾರ್ಯ ಎಂದ ಸಿದ್ಧರಾಮಯ್ಯ…
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಿಮ್ಮ ಹೋರಾಟ ಬೇಕಿದೆ. ಗಾಂಧಿಯವರ ನಂತರ ಹೋರಾಟಗಾರರೇ ಇಲ್ಲ. ಇದೀಗ ಅನಿರ್ಧಿಷ್ಟಾವಧಿ ಧರಣಿ ಮುಂದುವರಿಸಿದ್ದೀರಾ. ಇಂತ ಹೋರಾಟ ಇಂದು ಅನಿವಾರ್ಯ. ನೀವು ಇನ್ನೂ ಹೆಚ್ಚು ದಿನಗಳ ಕಾಲ ಆರೋಗ್ಯವಾಗಿರಬೇಕು. ಶುಗರ್ ಲೆವೆಲ್ ಕೂಡ ಪ್ರಮುಖವಾಗಿರಬೇಕು. ನೀವು ಉಪವಾಸ ಸತ್ಯಾಗ್ರಹವನ್ನ ಕೈಬಿಡಿ. ವೈದ್ಯರ ಸಲಹೆಯಂತೆ ನೀವು ನಡೆದುಕೊಳ್ಳಿ ಎಂದು ಮನವಿ ಮಾಡಿದರು.
ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಭಂದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದ್ಯಾಕೆ ಹಾಗೆ ಮಾಡಿದ್ದಾರೋ ಗೊತ್ತಿಲ್ಲ. ನಾವು ಯಾವತ್ತೂ ಹಾಗೆ ಮಾಡಿಲ್ಲ. ಎಲ್ಲವೂ ಪಾರದರ್ಶಕವಾಗಿರಬೇಕು. ಜನರಿಗೆ ಚರ್ಚೆಗಳು ಪಾರದರ್ಶಕವಾಗಿಯೇ ತಿಳಿಯಬೇಕು. ಆಗಲೇ ಪ್ರಜಾಪ್ರಬಹುತ್ವಕ್ಕೆ ಅರ್ಥ ಬರುವುದು. ಅವರಿಗೆ ಭಯನೋ ಏನೋ ನೀವು ಅವರನ್ನೇ ಕೇಳಬೇಕು, ಮಾಧ್ಯಮಗಳನ್ನ ನಿರ್ಭಂದಿಸುವುದು ಸರಿಯಲ್ಲ ಎಂದು ಖಂಡಿಸಿದರು.
ನಮ್ಮ ಅವಧಿಯಲ್ಲಿ ಮಾಧ್ಯಮ ನಿರ್ಭಂದಿಸಿಲ್ಲ. ನಾವು ಸಂಪೂರ್ಣ ಸ್ವಾತಂತ್ರ್ಯವನ್ನ ಕೊಟ್ಟಿದ್ದೆವು. ಹಳೆಯ ಪ್ರಸ್ತಾಪ ಅಂದ್ರೆ ನಾವ್ಯಾಕೆ ಮಾಡಲಿಲ್ಲ. ನಾವು ಮಾಡಬಹುದಿತ್ತಲ್ವೇ ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ನಮ್ಮ ಎಲ್ಲಾ ಪ್ರಸ್ತಾಪ ಇವರು ಮಾಡ್ತಾರಾ. ಇದು ಗೂಬೆ ಕೂರಿಸುವ ಪ್ರಯತ್ನ ಇಂತ ಕೆಲಸವನ್ನ ನಾವು ಮಾಡಿಲ್ಲ, ಮಾಡೋದು ಇಲ್ಲ ಎಂದರು.
Key words: Media -restrictions – session- Former Prime Minister-HD Deve Gowda- irony – government’s move