ಮೈಸೂರು,ಡಿಸೆಂಬರ್,2,2024 (www.justkannada.in): ಬೇರು ಸೇವಾ ಟ್ರಸ್ಟ್ ವತಿಯಿಂದ ಬಿಜಿಎಸ್- ಗ್ಲೋಬಲ್ ಇನ್ಸ್ ಟಿಟ್ಟೂಟ್ ಆಫ್ ಮೆಡಿಕಲ್ ಸೈನ್ಸ್” ಅವರ ಸಹಯೋಗದೊಂದಿಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ನಾಗರಹೊಳೆ ಮತ್ತು ಕಲ್ಲಳ್ಳ ವನ್ಯಜೀವಿ ವಲಯದ ಅರಣ್ಯ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅರಣ್ಯ ಅಧಿಕಾರಿ ಎಸಿಎಫ್ ಅನನ್ಯಕುಮಾರ್ ಜೆ , “ಅರಣ್ಯ ಸಿಬ್ಬಂದಿಗಳಿಗೆ ಹೊರಗಿನ ಜಗತ್ತಿನಿಂದ ಸಹಕಾರ ಸಿಗುವುದು ತುಂಬಾ ಕಷ್ಟ. ಇಂತಹ ಸಂದರ್ಭದಲ್ಲಿ ಬೇರು ಸೇವಾ ಟ್ರಸ್ಟ್ ರೀತಿಯ ಸಂಸ್ಥೆಗಳು ಇತ್ತ ಕಡೆ ಗಮನ ಹರಿಸಿರುವುದು ತುಂಬಾ ಸಂತೋಷ. ಈ ರೀತಿಯ ವೈದ್ಯಕೀಯ ಶಿಬಿರಗಳು ಅರಣ್ಯ ಸಿಬ್ಬಂದಿಗಳ ಆರೋಗ್ಯ ಉತ್ತಮ ಸ್ಥಿತಿಗೆ ಮತ್ತು ಕೆಲವು ಮುನ್ನೆಚ್ಚರಿಕೆ ಕ್ರಮ ವಹಿಸಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
“ಬೇರು ಟ್ರಸ್ಟ್” ನ ಸಂಸ್ಥಾಪಕಿ ಹಾಗೂ ಟ್ರಸ್ಟಿ ಡಿ. ಸುಮನ್ ಕಿತ್ತೂರು ಅವರು ಮಾತನಾಡಿ, “ಮಾನವೀಯ ಮೌಲ್ಯ, ಪ್ರಕೃತಿ ಮತ್ತು ಶಾಂತಿಯುತ ಸಹಬಾಳ್ವೆಗಾಗಿ ಬೇರು ತಂಡ ಕಾರ್ಯ ನಿರ್ವಹಿಸಲು ಸದಾ ಸಿದ್ದ” ಎಂದು ಅಭಿಪ್ರಾಯಿಸಿದರು.
ಬೇರು ತಂಡದ ಮತ್ತೊಬ್ಬ ಟ್ರಸ್ಟಿ ಹಾಗೂ ಕಲಾವಿದರಾದ ಕಿಶೋರ್ ಕುಮಾರ್ ಅವರು ಮಾತನಾಡಿ, “ಪ್ರತಿಯೊಬ್ಬರೂ ಪರಿಸರದ ಬಗ್ಗೆ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕರ್ತವ್ಯ ನಿರ್ವಹಿಸಬೇಕು” ಎಂದರು. ಕಲಾವಿದೆ ಮೇಘನಾ ಗಾಂವ್ಕರ್ ಅವರು ಮಾತನಾಡಿ, “ಪರಿಸರಕ್ಕೆ ಮತ್ತು ಅದರ ರಕ್ಷಕರಿಗೆ ನಾವು ಗೌರವ ನೀಡಬೇಕು” ಎಂದರು.
ಒಂದು ದಿನದ ಈ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ಪರೀಕ್ಷೆ, ಆಂಥ್ರೊಪೊಮೆಟ್ರಿ, ಶುಗರ್, ಬಿಪಿ ತಪಾಸಣೆ, ಹಿಮೋಗ್ಲೋಬಿನ್ ಅಂದಾಜು, ಇಸಿಜಿ (ಅಗತ್ಯವಿರುವವರಿಗೆ) ಸೇವೆಗಳನ್ನು ಒದಗಿಸಲಾಯಿತು. ಸುಮಾರು ಎಪ್ಪತ್ತಕ್ಕೂ ಹೆಚ್ಚಿನ ಸಿಬ್ಬಂದಿಗಳು ಮತ್ತು ನಾಗರಹೊಳೆಯ ಸರ್ಕಾರಿ ವಾಲ್ಮೀಕಿ ಆಶ್ರಮಶಾಲೆಯ ಮಕ್ಕಳಿಗೆ ಕೂಡ ಚರ್ಮರೋಗದ ಸಂಬಂಧಿತ ತಪಾಸಣೆ ನಡೆಸಲಾಯಿತು. ಜೊತೆಗೆ ಆರೋಗ್ಯ-ಆರೈಕೆ- ಸ್ವಚ್ಛತೆ ಬಗೆಗೆ ನಿಪುಣ ವೈದ್ಯರಿಂದ ತಿಳುವಳಿಕೆ ನೀಡಲಾಯಿತು.
ಬೇರು ತಂಡದ ಪ್ರಾಣಿಗಳ ರಕ್ಷಣಾ ಸಲಹೆಗಾರರಾದ ಡಾ. ಪ್ರಯಾಗ್ ಹಾಗೂ ಬಿಜಿಎಸ್ ವೈದ್ಯರಾದ ಡಾ. ಸತೀಶ್ ಚಂದ್ರ ಅವರುಗಳು ಅರಣ್ಯ ಸಿಬ್ಬಂದಿಗಳು ಕಾಡಿನಲ್ಲಿ ಎದುರಿಸುವ ಪ್ರಾಣಿಗಳ ಕಡಿತ ಮತ್ತು ನಂತರದ ಪ್ರಥಮ ಚಿಕಿತ್ಸೆ ಹಾಗೂ ವೈದ್ಯಕೀಯ ಸವಾಲುಗಳ ಕುರಿತು ಅರಣ್ಯ ಸಿಬ್ಬಂದಿಗಳಿಗೆ ಪ್ರಶ್ನೋತ್ತರ ಸಂವಾದ ನಡೆಸಿಕೊಟ್ಟರು.
ಶಿಬಿರದಲ್ಲಿ ಅರಣ್ಯ ಇಲಾಖೆಯ RFO ಮಂಜುನಾಥ್, DYRFO ನವೀನ್ ರಾವತ್ ಮುಂತಾದ ಅಧಿಕಾರಿಗಳು ಭಾಗವಹಿಸಿದ್ದರು. ಬರಹಗಾರ್ತಿ, ನಿರ್ಮಾಪಕಿ, ರೇಖಾರಾಣಿ, ಸುಚಿತ್ರಾ ವೇಣುಗೋಪಾಲ್, ಶ್ರೀನಿವಾಸ್, ಸುರಭಿ ಮತ್ತು ವಿಷ್ಣು ಕುಮಾರ್, ಯಶೋದಾ, ಹರ್ಷಿತಾ ವಿಷ್ಣು, ಗಾಯತ್ರಿ, ಬೇರು ಟ್ರಸ್ಟಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
Key words: Medical camp, forest officers , health