ಮೈಸೂರು, ನವೆಂಬರ್ 16, 2019 (www.justkannada.in): ಔಷಧ ಅಂಗಡಿ ಮಾಲೀಕರೇ ಎಚ್ಚರ… ಸಿಕ್ಕಿರುವ ಪರವಾನಗಿಯನ್ನು ದುರುಪಯೋಗಪಡಿಸಿಕೊಂಡು ಸರಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ.
ಹೌದು. ಔಷಧ ಮತ್ತು ಕಾಂತಿವರ್ಧಕ ಅಧಿನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮೈಸೂರಿನ ಗೋಕುಲಂನಲ್ಲಿರುವ ಆದಿತ್ಯ ಆಸ್ಪತ್ರೆ ಆವರಣದಲ್ಲಿರುವ ಮೆಡಿಕಲ್ ಸ್ಟೋರ್ ವಿರುದ್ಧ ಮೈಸೂರಿನ ಸಹಾಯಕ ಔಷಧ ನಿಯಂತ್ರಕ ಕಚೇರಿ ಕಠಿಣ ಶಿಸ್ತು ಕ್ರಮ ಕೈಗೊಂಡು ಪರವಾನಗಿ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಔಷಧ ಚೀಟಿಯಲ್ಲಿ ವೈದ್ಯರು ಹಾಗೂ ಹೆಸರು ಹಾಗೂ ವಿಳಾಸವನ್ನು ನಮೂದಿಸದೇ ಇರುವುದು, ಔಷಧ ವಿತರಣೆ ನಂತರ ವೈದ್ಯರ ಸಲಹಾ ಚೀಟಿಯ ಮೇಲೆ ಹೆಸರು, ವಿಳಾಸ ಹಾಗೂ ವಿತರಣೆ ಮಾಡಿದ ದಿನಾಂಕವನ್ನು ನಮೂದಿಸದಿರುವುದು ಹೀಗೆ ನಾನಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಗೋಕುಲಂ 3ನೇ ಹಂತದಲ್ಲಿರುವ ಆದಿತ್ಯ ಆಸ್ಪತ್ರೆ ಆವರಣದಲ್ಲಿರುವ ಶ್ರೀರಾಮ ಮೆಡಿಕಲ್ಸ್ ಸ್ಟೋರ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನವೆಂಬರ್ 4ರಿಂದ 6ರವರೆಗೆ ಮೂರು ದಿನ ಪರವಾನಗಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ಹೀಗಾಗಿ ಮೆಡಿಕಲ್ ಸ್ಟೋರ್ ಮಾಲೀಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಈ ಕುರಿತು ಆರ್’ಟಿಐ ಕಾರ್ಯಕರ್ತ ರವಿ ಎಂಬುವವರು ಅರ್ಜಿ ಸಲ್ಲಿಸಿದ್ದರು.