ಬೆಂಗಳೂರು,ಫೆಬ್ರವರಿ,10,2021(www.justkannada.in) : ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಲಸಿಕೆಯನ್ನು ಪಡೆದು ಸಾಮಾನ್ಯ ಜನರಿಗೆ ಸ್ಪೂರ್ತಿ ಶಕ್ತಿಯಾಗಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ವಾಣಿ ವಿಲಾಸ ಆಸ್ಪತ್ರೆಯಲ್ಲಿ ಪ್ರಸೂತಿ ಟ್ರೈಯಾಜ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಐಸಿಯು ಉದ್ಘಾಟನೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ಸೋಂಕು ಆರಂಭವಾದ ಹತ್ತೇ ತಿಂಗಳಲ್ಲಿ ರಾಜ್ಯಕ್ಕೆ ಲಸಿಕೆ ಬಂದಿದೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಲಸಿಕೆಯ ರಾಯಭಾರಿಗಳಾಗಬೇಕು. ವಿದ್ಯಾರ್ಥಿಗಳು ಆದ್ಯತೆಯಲ್ಲಿ ಬಂದು ಲಸಿಕೆ ಪಡೆದಾಗ ಬೇರೆ ಇಲಾಖೆಗಳ ಸಿಬ್ಬಂದಿಗೆ ಧೈರ್ಯ ಬರುತ್ತದೆ. ಲಸಿಕೆ ಪಡೆಯಲು ಕೆಲವರು ಪರೀಕ್ಷೆಯ ನೆಪ ಒಡ್ಡುತ್ತಿದ್ದಾರೆ. ಆದರೆ ಪರೀಕ್ಷೆಗೂ ಲಸಿಕೆಗೂ ಸಂಬಂಧವಿಲ್ಲ ಎಂದರು.
ಲಸಿಕೆ ಪಡೆದವರಿಗೆ ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಅನೇಕ ಅಧಿಕಾರಿಗಳು ಮುಂದೆ ಬಂದು ಲಸಿಕೆ ಪಡೆದು ಮಾದರಿಯಾಗಿದ್ದಾರೆ. ಈ ನೈತಿಕ ಸ್ಪೂರ್ತಿಯನ್ನು ಜನರಿಗೆ ನೀಡುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿಕೊಳ್ಳಬೇಕು ಎಂದು ಕೋರಿದರು.
ಕೆಲ ರಾಜ್ಯಗಳಲ್ಲಿ ಲಸಿಕೆ ಪಡೆಯದಿದ್ದರೆ ಸಂಬಳ ನೀಡುವುದಿಲ್ಲ ಎಂದು ಕೂಡ ಹೇಳಲಾಗಿದೆ. ಆದರೆ ನಮ್ಮಲ್ಲಿ ಆ ರೀತಿಯ ನಿರ್ಬಂಧ ಹೇರಿಲ್ಲ. ಭಾರತದ ಲಸಿಕೆಗೆ 25 ದೇಶಗಳಲ್ಲಿ ಬೇಡಿಕೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಉಚಿತವಾಗಿ ಲಸಿಕೆ ನೀಡುವಾಗ ಲಸಿಕೆ ಪಡೆಯಲು ಮುಂದೆ ಬರಬೇಕು ಎಂದರು.
ಕೋವಿಡ್ ಬಂದ ಬಳಿಕ, ಆರೋಗ್ಯ ಇಲ್ಲದಿದ್ದರೆ ಏನೂ ಇಲ್ಲ ಎಂದು ಅರ್ಥವಾಗಿದೆ. ಆದ್ದರಿಂದ ಏಳೆಂಟು ತಿಂಗಳಲ್ಲಿ ರಾಜ್ಯ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಿದೆ. ಆರೋಗ್ಯ ಇಲಾಖೆಯಡಿ ಸುಮಾರು 3 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳು, ವೈದ್ಯಕೀಯ ಶಿಕ್ಷಣ ಇಲಾಖೆಯಡಿ, ನಾಲ್ಕೂವರೆ ಸಾವಿರ ಆಕ್ಸಿಜನ್ ಹಾಸಿಗೆ ಇತ್ತು. ಈಗ ಎರಡೂ ಇಲಾಖೆಗಳ ಆಸ್ಪತ್ರೆಗಳು ಸೇರಿ ಒಟ್ಟು 30 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳನ್ನು ಅಳವಡಿಸಲಾಗಿದೆ. ಈ ಸಾಲಿನ ಬಜೆಟ್ ನಲ್ಲೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಆರಂಭದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಗಣನೀಯ ಸೇವೆ ಸಲ್ಲಿಸಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಆದ 200 ಕ್ಕೂ ಹೆಚ್ಚು ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಇದಕ್ಕಾಗಿ ವಿಶೇಷ ಅಭಿನಂದನೆಗಳು ಎಂದರು.
key words : Medical-students-vaccinated-inspiration-Minister- Dr.K.Sudhakar