ಮೈಸೂರು,ಜನವರಿ,20,2022(www.justkannada.in): ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರ ಮೇಳೆ ಎಫ್ ಐಆರ್ ಹಾಕಿರುವ ಹಿನ್ನೆಲೆ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಎ ವೆಂಕಟೇಶ್, ಸ್ವಾತಂತ್ರ್ಯ ಸೇನಾನಿಗಳ ಜೊತೆಯಲ್ಲಿ ಮೈಸೂರಿನ ಗಾಂಧಿ ಪ್ರತಿಮೆ ಎದುರು ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲು ಪಾಲ್ಗೊಂಡ ಮೈಸೂರಿನ ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷರ ಮೇಲೆ ಎಫ್ಐಆರ್ ದಾಖಲು ಮಾಡಿದ್ದು, ಮೈಸೂರಿನ ಪೋಲಿಸ್ ಗಿರಿಯ ನೈತಿಕತೆಯನ್ನು ಸಾರ್ವಜನಿಕರು ಪ್ರಶ್ನೆ ಮಾಡಬೇಕಾಗಿದೆ. ಸ್ವಾತಂತ್ರ್ಯ ಸೇನಾನಿಗಳು ಹಾಗೂ ಶಾಸಕರು ಪಾಲ್ಗೊಂಡಿದ್ದು 7:00ಯ ಗಂಟೆಯ ಸಮಯದಲ್ಲಿ, ಅಂದು ಯಾವ ಸಾರ್ವಜನಿಕರಿಗೆ ತೊಂದರೆಯಾಗಿತ್ತು ಹಾಗೂ ಯಾವ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ ಅದನ್ನ ಪೊಲೀಸ್ ಆಯುಕ್ತರು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಶಾಸನಸಭೆಯ ಶಾಸಕರಿಗೆ ಮಾಜಿ ಶಾಸಕರಿಗೆ ಪೊಲೀಸರು ಏಕಾಏಕಿ ಕೇಸು ದಾಖಲಿಸುವುದು ಪ್ರಜಾಪ್ರತಿನಿಧಿ ಕಾಯ್ದೆ ಸ್ಪಷ್ಟ ಉಲ್ಲಂಘನೆಯಾಗಿದೆ. ಬಿಜೆಪಿ ಸರ್ಕಾರದಲ್ಲಿ ಬಿಜೆಪಿಗರು ಮಾಡುವ ಯಾವುದೇ ಕಾನೂನುಬಾಹಿರ ಸಭೆ ಚಳುವಳಿಗಳಿಗೆ ಸರ್ಕಾರವೇ ಎಲ್ಲಾ ರೀತಿಯ ಸವಲತ್ತು ಮತ್ತು ಕಾನೂನು ಸಹಕಾರ ನೀಡುತ್ತಿದೆ. ಈಗ ಮುಖ್ಯಮಂತ್ರಿಗಳಿಗೆ ಭದ್ರತೆ ಒದಗಿಸುವ ಪೊಲೀಸ್ ಅಧಿಕಾರಿಗಳೇ ಗಾಂಜಾ-ಅಫೀಮು ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೆಚ್.ಎ ವೆಂಕಟೇಶ್ ಲೇವಡಿ ಮಾಡಿದರು.
ಮೈಸೂರಿನ ಸಂಸದರಾದ ಪ್ರತಾಪ್ ಸಿಂಹ ಮೇಕೆದಾಟು ಪಾದಯಾತ್ರೆಯನ್ನು ರಾಜಕೀಯ ಪಾದಯಾತ್ರೆ ಎಂದು ಟೀಕೆ ಮಾಡಿದ್ದಾರೆ. ಸಂಸದರಿಗೆ ಪಾದಯಾತ್ರೆ ಚಳುವಳಿ ಬಡವರ ಹೋರಾಟಗಳ ಬಗ್ಗೆ ತಿಳುವಳಿಕೆ ಇಲ್ಲ. ಕೇವಲ ಹದಿನೈದು ದಿನಕ್ಕೆ ಸಂಸದರಾಗಿ ಆಯ್ಕೆಯಾದರು, ಅದು ದೆಹಲಿಯಿಂದ ಬಂದ ಪ್ರಸಾದ ಎಂದು ವ್ಯಂಗ್ಯವಾಡಿದರು.
ದೇಶದ ಶಾಸನ ಸಭೆಗಳಲ್ಲಿ ಸುಮಾರು 45 ವರ್ಷಗಳ ಕೆಲಸ ಮಾಡಿದ ಮಲ್ಲಿಕಾರ್ಜುನ ಖರ್ಗೆ, ದೇಶಪಾಂಡೆ, ಸಿದ್ದರಾಮಯ್ಯ, ಜಿ ಪರಮೇಶ್ವರ್, ಡಿಕೆ ಶಿವಕುಮಾರ್, ಎಚ್ ಕೆ ಪಾಟೀಲ್, ಇಂತಹ ನೂರಾರು ಮಂದಿ ಕಾಂಗ್ರೆಸ್ ಹಿರಿಯ ಮುತ್ಸದ್ದಿಗಳು ರಾಜ್ಯದ ಹಿತಕ್ಕಾಗಿ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಕಾರಣಕ್ಕಾಗಿ ಕೇಸು ದಾಖಲಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ಲೋಕೇಶ್ ರಾವ್, ಭಾಸ್ಕರ್, ಶಿವನಾಗಪ್ಪ, ಅಕ್ಬರ್ ಹಾಲಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಎಡತಲೆ ಮಂಜುನಾಥ್, ಉತ್ತನಳ್ಳಿ ಶಿವಣ್ಣ, ಡಿಸಿಸಿ ವಕ್ತಾರರಾದ ಕೆ. ಮಹೇಶ್ ಭಾಗಿಯಾಗಿದ್ದರು.
Key words: Meekadatu-FIR – KPCC spokesperson- HK Venkatesh- outrage – government.