ಬೆಂಗಳೂರು, ಸೆಪ್ಟಂಬರ್, 11,2020(www.justkannada.in): ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಬಳಕೆ ಬಗ್ಗೆ ಯೋಜನೆ ರೂಪಿಸುವ ಸಂಬಂಧ ಶೀಘ್ರವಾಗಿ ಸಭೆ ಕರೆಯುವುದಾಗಿ ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಭರವಸೆ ನೀಡಿದ್ದಾರೆ.
ಪತ್ರಿಕಾ ವಿತರಕರಿಗೆ ಸರ್ಕಾರ 2 ಕೋಟಿ ರೂ ನಿಧಿ ನೀಡಿ ಎರಡೂವರೆ ವರ್ಷ ಕಳೆದರೂ ನಯಾ ಪೈಸೆ ಹಣ ಸದ್ಭಳಕೆ ಆಗಿಲ್ಲ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಪತ್ರ ಬರೆದು ಗಮನಸೆಳೆದಿದ್ದು, ಅದಕ್ಕೆ ಆಯುಕ್ತರು ಕೂಡಲೇ ಸ್ಪಂದಿಸಿದ್ದಾರೆ.
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗಾಗಿ ಎರಡು ಕೋಟಿ ಹಣದ ನಿರ್ವಹಣೆಯನ್ನು ಮಾಧ್ಯಮ ಅಕಾಡೆಮಿಗೆ ವಹಿಸಲಾಗಿತ್ತು. ಈ ಸಂಬಂಧ ಸಭೆ ಕರೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆಯ ಜೊತೆಯಲ್ಲಿ ಮಾತನಾಡಿ, ಅಲ್ಲಿಯೂ ಅಸಂಘಟಿತ ಪತ್ರಿಕಾ ವಿತರಕರಿಗೆ ಸೌಲಭ್ಯ ಕೊಡಿಸಬೇಕು ಎನ್ನುವ ಕೆಯುಡಬ್ಲ್ಯೂಜೆ ಮನವಿಗೂ ಆಯುಕ್ತರು ಸ್ಪಂಧಿಸಿದ್ದು, ಈ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.
ಮಳೆ, ಚಳಿ, ಬಿಸಿಲೆನ್ನದೆ ಮನೆ ಮನೆಗೆ ನಿತ್ಯವೂ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರಿಗೆ ಕ್ಷೇಮಾಭಿವೃದ್ಧಿ ಯೋಜನೆ ರೂಪಿಸಬೇಕು ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಒತ್ತಾಯಿಸಿ ಪತ್ರ ಬರೆದಿದ್ದರು.
Key words: meeting – welfare -benefits – press –distributors- Information Department –Commissioner- Dr. PS Harsha