ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ: ಸಿ.ಎಂ ಸಿದ್ದರಾಮಯ್ಯ ಘೋಷಣೆ

I will make sincere efforts to control the ticket prices of other language (non kannada) films in the state. Chief Minister Siddaramaiah also announced that a 200-seater mini theatre would be set up in each district to promote artistic films.

 

ಬೆಂಗಳೂರು ಜ 24:  ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಸೇನಾನಿ ಸಾ.ರಾ.ಗೋವಿಂದು ಅವರ ಅಭಿನಂದನ ಕಾರ್ಯಕ್ರಮದಲ್ಲಿ ಗೋವಿಂದು ಅವರನ್ನು ಸನ್ಮಾನಿಸಿ, ಅಭಿನಂದಿಸಿ ಮಾತನಾಡಿದರು.

ಪಕ್ಕದ ರಾಜ್ಯಗಳಲ್ಲಿ ಪರಭಾಷಾ ಚಿತ್ರಗಳಿಗೆ ಟಿಕೆಟ್ ದರ ಎಷ್ಟಿದೆ ಎಂದು ಪರಿಶೀಲಿಸಿ ರಾಜ್ಯದಲ್ಲಿ ಅದಕ್ಕೆ ತಕ್ಕಂತೆ ನಿಯಂತ್ರಣ ತರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.

ಕನ್ನಡ ಕೆಲಸಕ್ಕೆ ಸರ್ಕಾರ ಸದಾ ಮುಂದೆ ಇರುತ್ತದೆ. ದಿನಾಂಕ 27 ರಂದು ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪುತ್ಥಳಿ ಸ್ಥಾಪಿಸಲಾಗುವುದು ಎಂದರು.

ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಮಾಡಿದ ಕೆಲಸಗಳು ಸ್ಮರಣೀಯ. ರಾಜ್ ಅವರ ವಿನಯ, ಸಭ್ಯತೆ, ಸರಳತೆ ಇಡೀ ಮನುಷ್ಯ ಕುಲಕ್ಕೇ ಮಾದರಿ. ಡಾ.ರಾಜ್ ಕುಮಾರ್ ಅವರಿಗೆ ರಾಜ್ ಅವರೇ ಸಾಟಿ. ಇವರಿಗೆ ಸಾಟಿ ಆಗುವವರು ಯಾರೂ ಇನ್ನೂ ಬಂದಿಲ್ಲ ಎಂದರು.

ಡಾ.ರಾಜ್ ಅವರ ಗೋಕಾಕ್ ಚಳವಳಿಯಲ್ಲಿ ನಾನೂ ಅವರ ಭಾಷಣ ಕೇಳಲು ಹೋಗಿದ್ದೆ. ರಾಜ್ ಅವರಿಂದಾಗಿ ಕನ್ನಡ ಹೆಚ್ಚು ಶಕ್ತಿಯುತವಾಗಿ ಬೆಳೆಯಿತು ಎಂದರು‌.

ನಾನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾದಾಗ ಸಾ.ರಾ.ಗೋವಿಂದು ಮತ್ತು ಹಿರಿಯ ಪತ್ರಕರ್ತ ವೆಂಕಟೇಶ್  ಅವರ ಪರಿಚಯ ಮೊದಲ ಬಾರಿ ಆಯಿತು. ಇವರ ಕನ್ನಡ ಪರ ಹೋರಾಟದ ಬಗ್ಗೆ ಆಗಲೇ ನನಗೆ ಅಭಿಮಾನ ಇತ್ತು. ನನಗೆ ಕನ್ನಡ ನಾಡು, ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇದೆ. ಇದನ್ನು ಗ್ರಹಿಸಿಯೇ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ನನ್ನನ್ನೇ ಕನ್ನಡ ಕಾವಲು ಸಮಿತಿಗೆ ಅಧ್ಯಕ್ಷನನ್ನಾಗಿಸಿದರು ಎಂದು ಸ್ಮರಿಸಿ, ಗೋವಿಂದು ಅವರ ಬದುಕು ಅವರ ಹೋರಾಟಗಳ ಕಾರಣದಿಂದಾಗಿ ಸಾರ್ಥಕವಾಗಿದೆ ಎಂದರು.

ನಾನು ಕೇಂದ್ರ ಸರ್ಕಾರಕ್ಕೆ ಬರೆಯುವ ಪತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಕ್ಕೂ ಇವತ್ತಿಗೂ ಕನ್ನಡದಲ್ಲೇ ಸಹಿ ಹಾಕ್ತೀನಿ ಎಂದರು.

ಬೇರೆ ಧರ್ಮ ಮತ್ತು ಇತರೆ ಭಾಷೆಗಳ ಬಗ್ಗೆ ಸಹಿಷ್ಣತೆ ಇರಬೇಕು. ನಮ್ಮ ಭಾಷೆ ಬಗ್ಗೆ ಅಭಿಮಾನ ಹೆಚ್ಚಾಗಿರಬೇಕು. ತಾಯಿ ಭಾಷೆ, ತಾಯಿ ನೆಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಸಾ.ರಾ.ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಕನ್ನಡ ಪರವಾದ ಹೋರಾಟಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಇವರ ಹೋರಾಟದ ಫಲವಾಗಿ ಕನ್ನಡ ಚಿತ್ರರಂಗದ ಅಡಿಪಾಯ ಗಟ್ಟಿ ಆಯಿತು ಎಂದು ಶ್ಲಾಘಿಸಿದರು.

ಹಿರಿಯ ಸಾಹಿತಿ ಹಂಪನಾ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋ.ರು.ಚನ್ನಬಸಪ್ಪ, ನಾಡೋಜ ಬರಗೂರು ರಾಮಚಂದ್ರಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಹಿರಿಯ ಪತ್ರಕರ್ತರಾದ ವೆಂಕಟೇಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

key words: 200-seater, mini theatre, set up in every district, CM Siddaramaiah

SUMMARY: 

200-seater mini theatre to be set up in every district: CM Siddaramaiah

I will make sincere efforts to control the ticket prices of other language (non kannada) films in the state. Chief Minister Siddaramaiah also announced that a 200-seater mini theatre would be set up in each district to promote artistic films.