ಮೈಸೂರು,ಅಕ್ಟೋಬರ್,13,2020(www.justkannada.in): ಬಿ.ಶ್ರೀ ರಾಮುಲು ಅವರ ಖಾತೆ ಬದಲಾವಣೆ ಮಾಡುವ ಮೂಲಕ ರಾಜಕೀಯವಾಗಿ ತುಳಿಯುವ ಹುನ್ನಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಆರೋಪಿಸಿದರು.
ಇಂದು ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಶ್ರೀರಾಮುಲು ಅವರ ಖಾತೆ ಬದಲಾವಣೆ ಮಾಡಿದಕ್ಕೆ ಆಕ್ರೋಶ ಹೊರ ಹಾಕಿದರು.
ಈ ವೇಳೆ ಮಾತನಾಡಿದ ದ್ಯಾವಪ್ಪ ನಾಯಕ, ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಶ್ರೀ ರಾಮುಲು ಕೂಡ ಪ್ರಮುಖರು. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸೀಟು ಗೆಲ್ಲಲು ಶ್ರೀ ರಾಮುಲುರವರು ಸಹ ಕಾರಣ. ಚುನಾವಣೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಉಪ ಮುಖ್ಯಮಂತ್ರಿ ಸ್ಥಾನವನ್ನು ಕೊಡದೆ ಕೇವಲ ಸಚಿವ ಸ್ಥಾನ ನೀಡಿದ್ರು. ಆ ಸಮಯದಲ್ಲೂ ನಮ್ಮ ಜನಾಂಗ ಸುಮ್ಮನಿತ್ತು. ಈಗ ಎರಡು ಸಚಿವ ಸ್ಥಾನದಲ್ಲಿ ಒಂದನ್ನು ಕಿತ್ತುಕೊಂಡು ರಾಮುಲು ಗೆ ಅವಮಾನ ಮಾಡಿದ್ದಾರೆ. ಇದು ನಾಯಕ ಜನಾಂಗಕ್ಕೆ ಮಾಡಿದ ಅವಮಾನ ಎಂದು ಕಿಡಿಕಕಾರಿದರು.
ರಾಮುಲು ಅವರನ್ನು ರಾಜಕೀಯವಾಗಿ ತುಳಿಯುತ್ತಿರುವುದು ಕಂಡು ಬರುತ್ತಿದೆ. ಇದನ್ನು ನಮ್ಮ ಸಮುದಾಯ ಸಹಿಸುವುದಿಲ್ಲ. ನಮ್ಮ ಸಮುದಾಯ ಸದಾ ರಾಮುಲು ಜೊತೆ ಇರುತ್ತದೆ. ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರಲ್ಲಿ ನಾವು ಮನವಿ ಮಾಡುತ್ತೇವೆ. ರಾಮುಲುಗೆ ಸಚಿವ ಸ್ಥಾನದ ಜೊತೆಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಜೊತೆಗೆ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Key words: minister- account -politically –tinged- Karnataka State nayaka hitharaksana vedike-mysore