ಬೆಂಗಳೂರು,ಮಾರ್ಚ್,9,2021(www.justkannada.in): ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ 14000 ಗಿಡ ನೆಡುವ ಬೃಹತ್ ಕಾರ್ಯಕ್ರಮವನ್ನು ಬೆಂಗಳೂರಿನ ಜಕ್ಕಾಸಂದ್ರದಲ್ಲಿ ಉದ್ಘಾಟಿಸಿದರು.
ಸೇ ಟ್ರೀಸ್ (say tree) ಎನ್ವಿರಾನ್ಮೆಂಟಲ್ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಿತ್ತು. ಕೆ.ಎಸ್.ಆರ್. ಪಿ ಪೊಲೀಸ್ ಕ್ವಾಟ್ರರ್ಸ್, ಜಕ್ಕಸಂದ್ರ 1ನೇ ಬ್ಲಾಕ್, ಕೋರಮಂಗಲದಲ್ಲಿ ನಡೆದ ಸಮಾರಂಭದಲ್ಲಿ 14,000 ಗಿಡ ನೆಡುವ ಕಾರ್ಯಕ್ರಮವನ್ನು ಸಚಿವ ಅರವಿಂದ ಲಿಂಬಾವಳಿ ಗಿಡ ನೆಟ್ಟು ನೀರುಣಿಸುವ ಮೂಲಕ ಉದ್ಘಾಟಿಸಿದರು.
14,000 ಗಿಡ ನೆಡುವ ಉದ್ದೇಶಿತ ಯೋಜನೆಯ ಜಾಗ ಕೇಂದ್ರ ರೇಷ್ಮೆ ಮಂಡಳಿ (ಸೆಂಟ್ರಲ್ ಸಿಲ್ಕ್ ಬೋರ್ಡ್) ಜಂಕ್ಷನ್ ನಿಂದ ಕೇವಲ 200 ಮೀಟರ್ ದೂರದಲ್ಲಿದೆ. ಮಿಯಾವಾಲ್ಕಿ ಅರಣ್ಯ ಎಂದು ಕರೆಯಲ್ಪಡುವ ಈ ದಟ್ಟವಾದ ಗಿಡವನ್ನು ನೆಟ್ಟ ಪ್ರದೇಶದ ಮರಗಳು ,ಸಾಮಾನ್ಯ ಮರಗಳಿಗಿಂತ ಶೇ. 30-40 ರಷ್ಟು ವೇಗವಾಗಿ ಬೆಳೆಯುತ್ತವೆ ಮತ್ತು ಕೇವಲ 2.5 ವರ್ಷಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಹೀರಿಕೊಂಡು ಕೇಂದ್ರ ರೇಷ್ಮೆ ಮಂಡಳಿಯ (ಸೆಂಟ್ರಲ್ ಸಿಲ್ಕ್ ಬೋರ್ಡ್) ಸುತ್ತಲಿನ ಪ್ರದೇಶದ ಮಾಲಿನ್ಯವನ್ನು ಕಡಿಮೆ ಮಾಡಲಿದೆ.
ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ ಬೆಂಗಳೂರನಲ್ಲಿ ಕಾಡು ಬೆಳಸುತ್ತಿರುವುದು ಸಂತಸದ ಸಂಗತಿ, ಬೆಂಗಳೂರನಲ್ಲಿ ಶೇ.9 ರಷ್ಟು ಕಾಡಿದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 80 ರಷ್ಟು ಕಾಡಿದೆ. ಕೆ. ಎಸ್. ಆರ್. ಪಿ ಕ್ಯಾಂಪಸ್ ನ ನಿವಾಸಿಗಳು ಇಲ್ಲಿನ ಗಿಡಗಳ ರಕ್ಷಣೆ ಮಾಡಿ ಬೆಳೆಸಬೇಕು ಎಂದು ಅವರು ಹೇಳಿದರು.
ಸ್ಥಳೀಯ ನಿವಾಸಿಗಳು ಒಂದೊಂದು ಗಿಡದ ರಕ್ಷಣೆ ಮಾಡಿದರೆ ಉತ್ತಮವಾಗಿ ಗಿಡಗಳು ಬೆಳೆಯುತ್ತವೆ. ಅರಣ್ಯ ಇಲಾಖೆಯಲ್ಲಿ ಉತ್ತಮ ಯೋಜನೆಯಿದ್ದು, ಯಾರಾದರು ಜಮೀನು ನೀಡಿದರೆ ಟ್ರಿ ಪಾರ್ಕ್ ಮಾಡಲಾಗುವುದು. ಸೋಶಿಯಲ್ ಫಾರೆಸ್ಟ್ ನಿರ್ಮಾಣ ನಾವೆಲ್ಲರೂ ಮಾಡಬೇಕಿದೆ, ಕಾಡು ಬೆಳೆದರೆ ನಾಡು ಉಳಿಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕಾಡು ಬೆಳೆಸಿ, ನಾಡು ಉಳಿಸೋಣ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ತನ ಸದಸ್ಯರಾದ ರಘುನಾಥ ಮಲ್ಕಾಪುರ, ಕೆಎಸ್ ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್, ಕೆಎಸ್ಆರ್ ಪಿ ಡಿಐಜಿಪಿ ವಿಕಾಶ್ ಕುಮಾರ್ ವಿಕಾಶ್, ಬಿಬಿಎಂಪಿ ಮಾಜಿ ಸದಸ್ಯರಾದ ಸರಸ್ವತಮ್ಮ, ಕ್ಲೆಮೆಂಟ್ ಜಯಕುಮಾರ, ದೇವಕಾಂತ, ದುರ್ಗೇಶ ಅಗ್ರಹಾರ , ಮದಸೂದನ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Key words: Minister -Arvind Limbavali – campaign – plant -14000