ಕಲಬುರಗಿ,ಫೆಬ್ರವರಿ,12,2022(www.justkannada.in): ಸಮಾಜದಲ್ಲಿ ಇಂದು ನಕಾರಾತ್ಮಕ ಭಾವನೆಗಳೇ ಹೆಚ್ಚಾಗುತ್ತಿದ್ದು, ಸ್ವಾರ್ಥಕೇಂದ್ರಿತ ಪ್ರವೃತ್ತಿ ಕಂಡುಬರುತ್ತಿದೆ. ಇದು ಕಣ್ಮರೆಯಾಗಿ, ಸಮಾಜವನ್ನು ಸದೃಢವಾಗಿ ಕಟ್ಟಲು ಎಲ್ಲರೂ ನೀರೆರೆಯುವಂತಹ ಮನೋಭಾವ ಬರಬೇಕಾದ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.
ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ರಾಜ್ಯ ಸರಕಾರ ಮತ್ತು ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ (ರೂಸಾ) ಯೋಜನೆಯ ಅನುದಾನದಲ್ಲಿ ನಿರ್ಮಿಸಿರುವ `ಸಾಧ್ವಿ ಶಿರೋಮಣಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರ’ದ ಕಟ್ಟಡವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕಲಬುರಗಿ ಭಾಗವು ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರು ಕ್ರಿಯಾಶೀಲವಾಗಿದ್ದ ಪ್ರದೇಶವಾಗಿದೆ. ಇಂತಹ ಚಾರಿತ್ರಿಕ ಪರಂಪರೆಯನ್ನುಳ್ಳ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಉಜ್ವಲ ಚಿಂತನೆಗಳು ಮೂಡಿಬಂದು, ಸಮಾಜಕ್ಕೆ ದಾರಿ ತೋರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಶಿಕ್ಷಣದ ಗುಣಮಟ್ಟ ವರ್ಧನೆಗೆ ಮತ್ತು ಅದು ಎಲ್ಲರಿಗೂ ಕೈಗೆಟುಕುವಂತೆ ಮಾಡಲು ಸರಕಾರ ಬದ್ಧವಾಗಿದ್ದು, ಅನೇಕ ಉಪಕ್ರಮಗಳನ್ನು ಜಾರಿಗೊಳಿಸಿದೆ. ಆದರೆ, ಸರಕಾರವೊಂದೇ ಎಲ್ಲವನ್ನೂ ಮಾಡಲಾರದು. ಆರೋಗ್ಯಕರ ಸಮಾಜವನ್ನು ಕಟ್ಟುವಲ್ಲಿ ಸಮಾಜದಲ್ಲಿರುವ ಸದಸ್ಯರೆಲ್ಲರ ಕೊಡುಗೆಯೂ ಮುಖ್ಯವಾಗುತ್ತದೆ ಎಂದು ಅವರು ನುಡಿದರು.
ಹೇಮರೆಡ್ಡಿ ಮಲ್ಲಮ್ಮ ಶತಮಾನಗಳ ಹಿಂದೆಯೇ ಉದಾತ್ತ ವಿಚಾರಗಳನ್ನು ಪ್ರತಿಪಾದಿಸಿ, ಭಕ್ತಿಮಾರ್ಗದಲ್ಲಿ ಮುನ್ನಡೆದು, ಉನ್ನತ ಸಾಧನೆ ಮಾಡಿದರು. ಅವರ ಬದುಕು ಮತ್ತು ವಿಚಾರಗಳು ಇಂದಿಗೂ ಸ್ಫೂರ್ತಿದಾಯಕವಾಗಿವೆ. ಈ ಅಧ್ಯಯನ ಪೀಠದ ಪ್ರಯೋಜನವು ಸ್ಥಳೀಯ ಸಮಾಜಕ್ಕೆ ಸಿಗಲಿ ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರು, ಶಾಸಕ ಸುಶೀಲ ನಮೋಷಿ, ಕುಲಪತಿ ಪ್ರೊ.ದಯಾನಂದ ಅಗಸರ ಮತ್ತು ವಿವಿ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.
Key words: Minister -Ashwath Narayan-Gulbarga university