ಮೈಸೂರು,ಫೆಬ್ರವರಿ,11,2021(www.justkannada.in): ಕೇಂದ್ರದ ಆತ್ಮ ನಿರ್ಭರ ಯೋಜನೆ ಮೂಲಕ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ವಾರ್ತಾ ಹಾಗೂ ಸಣ್ಣ ಕೈಗಾರಿಕಾ ಸಚಿವ ಸಿಸಿ ಪಾಟೀಲ್ ಹೇಳಿದರು.
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಸಚಿವ ಸಿಸಿ ಪಾಟೀಲ್, ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಹಾಗೆಯೇ ಇಂದು ಅಮಾವಾಸ್ಯೆ ಹಿನ್ನೆಲೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾದ್ಯಮಗಳ ಜತೆ ಮಾತನಾಡಿ ದೇಶಾದ್ಯಂತ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಿನ್ನೆಲೆ ಸಣ್ಣ ಕೈಗಾರಿಕೆಗಳ ಮೇಲಿನ ಆರ್ಥಿಕ ಹೊಡೆತ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ.ಸಿ ಪಾಟೀಲ್, ಸದ್ಯ ಈ ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳುಬೇಕಿದೆ. ಹಂತ ಹಂತವಾಗಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತಿದಿನ ಸಭೆಗಳನ್ನ ನಡೆಸುತ್ತಿದ್ದೇನೆ. ಸಮಸ್ಯೆಗಳನ್ನ ಬೇಗ ಅರ್ಥ ಮಾಡಿಕೊಳ್ಳುತ್ತೇನೆ. ನನಗೆ ಇಲಾಖೆಯನ್ನ ಅರ್ಥ ಮಾಡಿಕೊಳ್ಳಲು ಇನ್ನೂ 15 ದಿನಗಳ ಕಾಲಾವಕಾಶ ಬೇಕು, ಇಲಾಖೆಯನ್ನ ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಯಾವ ರೀತಿ ಚೈತನ್ಯ ನೀಡಬೇಕು ಎಂಬುದನ್ನ ರಾಜ್ಯ ಬಜೆಟ್ ಮುನ್ನ ಈ ಪ್ರಯತ್ನ ಮಾಡುತ್ತೇನೆ ಎಂದರು.
ತಾಲ್ಲೂಕು ಪತ್ರಕರ್ತರಿಗೆ ಜೀವ ವಿಮಾ ಯೋಜನೆ…
ರಾಜ್ಯ ಕಾರ್ಯನಿರತ ಪತ್ರಕರ್ತರ ಜೀವ ವಿಮಾ ಯೋಜನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ.ಸಿ ಪಾಟೀಲ್, ರಾಜ್ಯದ ಕಾರ್ಯನಿರತ ಪತ್ರಕರ್ತರಿಗೆ ಈಗಾಗಲೇ ನಗರ ಪ್ರದೇಶದಲ್ಲಿ ನೋಂದಣಿಗೊಂಡ ಪತ್ರಕರ್ತರಿಗೆ ಜೀವ ವಿಮಾ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಪತ್ರಕರ್ತರಿಗೆ ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದೆ ಎಂದರು.
ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಸಣ್ಣ ಕೈಗಾರಿಕಾ ಇಲಾಖೆ ಮುಂದಾಗಿದೆ. ಕೊರೋನಾ ಲಾಕ್ ಡೌನ್ ನಂತರ ಸಣ್ಣ ಕೈಗಾರಿಕೆ ಚೇತರಿಕೆ ಕಂಡು ಬರುತ್ತಿದೆ. ಕೇಂದ್ರದ ಆತ್ಮ ನಿರ್ಬರ ಯೋಜನೆ ಮುಖಾಂತರ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ಜೊತೆಗೆ ಸಣ್ಣ ಕೈಗಾರಿಕೆಗಳನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿದ್ದೇವೆ. ವಿದ್ಯಾವಂತ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಂಡು ಮತ್ತಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ಉದ್ಯೋಗಶೀಲತಾ ತರಬೇತಿಗಳನ್ನು ನೀಡಲಾಗುವುದು ಎಂದು ಸಚಿವ ಸಿ.ಸಿ ಪಾಟೀಲ್ ತಿಳಿಸಿದರು.
ದಕ್ಷಿಣ ಏಷ್ಯಾದಲ್ಲಿ ಅತಿ ಹೆಚ್ಚು ಕೈಗಾರಿಕಾ ಉದ್ಯೋಗಿಗಳು ಇರುವ ಬೆಂಗಳೂರಿನ ಪೀಣ್ಯ ಕೈಗಾರಿಕೋದ್ಯಮದಲ್ಲಿ ಅತಿ ಹೆಚ್ಚು ಕೈಗಾರಿಕಾ ನೌಕರರಿದ್ದಾರೆ, ಅವರೆಲ್ಲರ ಹಿತ ಕಾಪಾಡಲು ರಾಜ್ಯ ಸರ್ಕಾರ ಮುಂದಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡುವುದು ನಮ್ಮ ಮೂಲ ಉದ್ದೇಶವಾಗಿದ್ದು ಕೇಂದ್ರದ ಆತ್ಮ ನಿರ್ಭರ್ ಯೋಜನೆ ಮುಖಾಂತರ ಆರ್ಥಿಕ ನೆರವು ಪಡೆದು ಸಣ್ಣ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಸಚಿವ ಸಿ.ಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
Key words: minister- CC Patil- visit- mysore-chamundi hills