ಮಂಡ್ಯ ಜಿಲ್ಲೆಯಲ್ಲಿ ಕೃಷಿ ವಿವಿ ಪ್ರಾರಂಭಿಸಲು ಸಕಲ ಸಿದ್ಧತೆ: ಸಚಿವ ಎನ್ ಚಲುವರಾಯಸ್ವಾಮಿ

ಮಂಡ್ಯ,ಜನವರಿ,15,2025 (www.justkannada.in): ರೈತರಿಗೆ ಕೃಷಿಯ ಮಾಹಿತಿ ನೀಡಿ ಕೃಷಿ ಅಧ್ಯಯನ ಮಾಡಲು ಸಹಕಾರಿಯಾಗುವ ಕೃಷಿ ವಿಶ್ವವಿದ್ಯಾಲಯವನ್ನು ವಿ.ಸಿ.ಫಾರಂ ಆವರಣದಲ್ಲಿ ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು‌ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ಇಂದು ನಾಗಮಂಗಲದ ದೇವಲಾಪುರದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರು ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ಪಡೆಯಲು‌ ಮಂಡ್ಯ ಜಿಲ್ಲೆಯಿಂದ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯಕ್ಮೆ ತೆರಳಬೇಕಿತು. ರೈತರು ಹೆಚ್ಚಿರುವ ಮಂಡ್ಯ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ಅವಶ್ಯಕತೆಯನ್ನು ಮನಗಂಡು ಪ್ರಾರಂಭಿಸಲಾಗುತ್ತಿದೆ. ರೈತರು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಕೃಷಿ ವಿಶ್ವವಿದ್ಯಾಲಯದಲ್ಲಿ ವಿವಿಧ ರೀತಿಯ ತಳಿಗಳು ಬೆಳೆಗೆ ಬಳಸಬೇಕಿರುವ ರಸಗೊಬ್ಬರ ಸೇರಿದಂತೆ ಪ್ರತಿಯೊಂದು ಮಾಹಿತಿ ಸಂಶೋಧಕರಿಂದ ದೊರಕಲಿದೆ ಎಂದರು.

ಸಂಕ್ರಾಂತಿ ಹಬ್ಬ ಆದಾಯವನ್ನು ಸಂಭ್ರಮಿಸುವ ಹಬ್ಬ ಸಂಕ್ರಾಂತಿ ಹಬ್ಬ ರೈತರು ತಾವು ಬೆಳೆದ ಭತ್ತ, ರಾಗಿ, ಕಾಳುಗಳನ್ನು ಒಟ್ಟುಗೂಡಿಸಿ, ಪೂಜೆ ಮಾಡಿ ಮನೆಗೆ ಬೇಕಾದಷ್ಟನ್ನು ಶೇಖರಿಸಿ ಉಳಿದದನ್ನು ಮಾರಾಟ ಮಾಡುತ್ತಾರೆ. ರೈತರಿಗೆ ಉತ್ತಮ ಆದಾಯ ಬರಲಿ ಎಂದು ಅವರು ಹಲವಾರು ತಿಂಗಳಿಂದ ಶ್ರಮಪಟ್ಟಿ ಪಡೆದ ಫಲವನ್ಬು ಪೂಜಿಸುವ ಹಬ್ಬ ಸಂಕ್ರಾಂತಿ ಹಬ್ಬ ಎಂದು ಅಭಿಪ್ರಾಯ ಪಟ್ಟರು.

ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಮಾತನಾಡಿ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು, 17 ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಕನಿಷ್ಠ 3 ಬಾರಿ ಭೇಟಿ ನೀಡಿ ಕೃಷಿಯ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಶ್ರಮ ವಹಿಸಿದ್ದಾರೆ. 84 ಲಕ್ಷ ಹೆಕ್ಟೇರ್ ಬಿತ್ತನೆ ಕಾರ್ಯಕ್ಕಾಗಿ 6 ಲಕ್ಷ ಟನ್ ಬಿತ್ತನೆ ಬೀಜವನ್ನು ರೈತರಿಗೆ ಯಾವುದೇ ತೊಂದರೆಯಿಲ್ಲದೇ ಒದಗಿಸಿದ್ದಾರೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ 1,47,000 ರೈತರಿಗೆ1400 ಕೋಟಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗಿದೆ. ಕಳೆದ ವರ್ಷ ಮೈ ಶುಗರ್ ಪುನಶ್ಚೇತನಕ್ಕೆ 50 ಕೋಟಿ ರೂ ಹಣವನ್ನು ನೀಡಲಾಗಿತ್ತು. ಈ ಬಾರಿ ಕಾರ್ಖಾನೆ ಉತ್ತಮವಾಗಿ ನಡೆಯುತ್ತಿದೆ. ಇದಕ್ಕೆ ಕಾರಣಕರ್ತರಾದ ಹಾಗೂ ಜಿಲ್ಲೆಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿರುವ ಕೃಷಿ ಸಚಿವರಿಗೆ ಧನ್ಯವಾದ ಅರ್ಪಿಸಿದರು.

ಮದ್ದೂರು, ಮಳವಳ್ಳಿ ಹಾಗೂ ಕೊಪ್ಪದ ಕೊನೆಯ ಭಾಗದ ಕೃಷಿ ಚಟುವಟಿಕೆಗೆ ನೀರು ತಲುಪಿಸಲು ವಿ.ಸಿ.ನಾಲೆ ಆಧುನೀಕರಣ ಕಾಮಗಾರಿಯನ್ನು 1400 ಕೋಟಿ ರೂ ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ 10,48,000 ಕೆ.ಎಸ್.ಆರ್. ಟಿಸಿ ಬಸ್ ಗಳಲ್ಲಿ ಉಚಿತ ಟಿಕೆಟ್ ನೀಡಿ 278 ಕೋಟಿ ರೂ. ಬರಿಸಲಾಗಿದೆ.  ಗೃಹ ಜ್ಯೋತಿ ಯೋಜನೆಯಡಿ 4,85,000 ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸಿ 280 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ ಕುಮಾರ ಅವರು ಮಾತನಾಡಿ ಮಕರ ಸಂಕ್ರಾಂತಿ ಮಣ್ಣಿನ, ರೈತರ, ಸುಗ್ಗಿ ಹಾಗೂ ಸಂಭ್ರಮದ ಹಬ್ಬ. ಸಂಕ್ರಾಂತಿ ಹಬ್ಬ ರೈತರು ಬೆಳೆದ ಬೆಳೆಗಳನ್ನು ಪೂಜಿಸಿ ಸಂಭ್ರಮಿಸುತ್ತಾರೆ. ಮಕರ ಸಂಕ್ರಾಂತಿ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕ. ಸಂಕ್ರಾಂತಿ ಹಬ್ಬವನ್ಬು ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ವಿನೂತನವಾಗಿ ಆಚರಿಸುತ್ತಿರುವುದು ಸಂತೋಷದಾಯಕ‌ ವಿಷಯ ಎಂದರು.

ಮಕರ ಸಂಕ್ರಾಂತಿಯು ಗ್ರಾಮೀಣ ಸೊಗಡನ್ನು ಯುವ ಪೀಳಿಗೆಗೆ ಪರಿಚಯಿಸುವ ಹಬ್ಬ. ಇದರಲ್ಲಿ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರಿಗೆ ಗೌರವ ಸಲ್ಲಿಸಬೇಕು. ಇಂದಿನ ಯುವ ಪೀಳಿಗೆ ಹಾಗೂ  ಮಕ್ಕಳು ಹೊಸತನದ ವೇಗದಲ್ಲಿ  ಕೃಷಿ, ವಿವಿಧ ಬೆಳೆ, ಗಿಡಗಳ ಪರಿಚಯವೇ ಇಲ್ಲದಂತೆಯಾಗಿದ್ದರೆ. ಅವರು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದರು.

ಸಂಕ್ರಾಂತಿ ಹಬ್ಬವನ್ನು ಮನೆಯಲ್ಲೇ ಕುಳಿತು ನಾಲ್ಕು ಗೋಡೆಯ ಮಧ್ಯ ಆಚರಿಸದೇ ಎಲ್ಲರೂ ಒಟ್ಟಿಗೆಗೂಡಿ ಸಂಭ್ರಮದಿಂದ ಆಚರಿಸುವ ಹಬ್ಬವಿದು. ರೈತರಿಗೆ ಶಕ್ತಿ ನೀಡಿ ಕೃಷಿಯಲ್ಲಿ ಸದಾ ಜೊತೆಯಲ್ಲಿರುವ ಗೋ ವನ್ನು ಪೂಜಿಸುವ ಹಬ್ಬ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೇವಲಾಪುರದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮಕ್ಕಳಿಗೆ ಸೌಲಭ್ಯಗಳ   ವಿದ್ಯೆ  ಸುಗ್ಗಿಯನ್ನು ಒದಗಿಸಲು ಮಾಜಿ ವಿಧಾನಪರಿಷತ್ ಶಾಸಕ ಅಪ್ಪಾಜಿಗೌಡ ಅವರು ಮನವಿ ಮಾಡಿದರು. ಸಚಿವರು ಕಾರ್ಯಕ್ರಮದಲ್ಲಿ ಒಪ್ಪಿಗೆ ನೀಡಿದರು.

ಕಾರ್ಯಕ್ರಮದಲ್ಲಿ  ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್,  ಗಣ್ಯರಾದ ಸ್ಟಾರ್ ಚಂದ್ರು,  ಹುಚ್ಚೇಗೌಡ, ಗ್ರಾಮ ಪಂಚಾಯಿತಿ ಆಧ್ಯಕ್ಷೆ ಸಿದ್ದಲಿಂಗಮ್ಮ, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ‌ಬಾಲದಂಡಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

ಸಂಕ್ರಾಂತಿ ಸಂಭ್ರಮ ಕಳೆಗಟ್ಟಿದ ಅಲಂಕೃತ ಎತ್ತಿನಗಾಡಿ ಮೆರವಣಿಗೆ

ಈ ಬಾರಿ ರೈತರ ಮೊಗದಲ್ಲಿ ಸಂತೋಷ ತುಂಬುವ ಸಂಕ್ರಾಂತಿ ಹಬ್ಬವನ್ನು‌ ವಿಶೇಷವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಲಾಪುರದಲ್ಲಿ ಆಚರಿಸಲಾಯಿತು. ರೈತರ ಈ ಹಬ್ಬದಲ್ಲಿ ಮುಖ್ಯ ಆಕರ್ಷಣೆ ಎತ್ತಿನಗಾಡಿ ಮೆರವಣಿಗೆ ‌‌ ಎತ್ತುಗಳನ್ನು ಹೂವುಗಳಿಂದ ಹಾಗೂ ಎತ್ತಿನಗಾಡಿಯನ್ನು ಬಾಳೆ ಕಂಬ,  ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಎತ್ತಿನಗಾಡಿಯ ಮುಂಭಾಗದಲ್ಲಿ ಪಟಕುಣಿತ, ಸೋಮನ ಕುಣಿತ, ಡೊಳ್ಳು ಕುಣಿತ, ಕೊಂಬು ಕಹಳೆ, ರಂಗನ ಕುಣಿತ, ಪೂಜಾ ಕುಣಿತ ವೀರಗಾಸೆ ಸೇರಿದಂತೆ ಪೂರ್ಣ ಕುಂಭ ಹೊತ್ತ ಮಹಿಳೆಯರು ವಿಶೇಷ ಮೆರಗು ನೀಡಿದರು.

ಇದೇ ಸಂದರ್ಭದಲ್ಲಿ ದೇವಲಪುರ ಕೆರೆಗೆ ಸಚಿವ ಚಲುವರಾಯಸ್ವಾಮಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು‌. ಸಚಿವರು ಎತ್ತಿನಗಾಡಿ ಏರಿ ಚಾಟಿ ಹಿಡಿದಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಸಚಿವ ಚಲುವರಾಯಸ್ವಾಮಿ ರಾಶಿ ಪೂಜೆ, ಕಡಲೆಕಾಯಿ, ಅವರೆಕಾಯಿ, ಬೆಲ್ಲದ ಪರಿಷೆ, ಗ್ರಾಮೀಣ ಕ್ರೀಡಾ ಸ್ಪರ್ಧೆಗಳಾದ ಹಗ್ಗ- ಜಗ್ಗಾಟ ಹಾಗೂ ಕಬ್ಬಡಿಯಲ್ಲಿ ಸ್ಪರ್ಧಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಗಮನ ಸೆಳೆದ  ವಸ್ತು ಪ್ರದರ್ಶನ‌ ಮಳಿಗೆಗಳು ರೈತರಿಗೆ ಮಾಹಿತಿ ಮೀಡಲು ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಪದ್ಧತಿ ಹಾಗೂ ರಾಗಿ ಬೆಳೆಯ ಪಾರಂಪರಿಕ ಹಾಗೂ ಆಧುನಿಕ ಪದ್ಧತಿಗಳು, ತೋಟಗಾರಿಕೆ ಇಲಾಖೆಯಿಂದ ಹಣ್ಣು ಹಾಗೂ ತರಕಾರಿ ಮೇಲಿನ ಆಕರ್ಷಕ ಕೆತ್ತನೆಗಳು, ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸರ್ಕಾರದ ಯೋಜನೆಗಳ ಕುರಿತು ವಿಷಯಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

Key words: agricultural university, Mandya district, Minister, Chaluvarayaswamy