ಬೆಂಗಳೂರು ಮೇ. 10,2021(www.justkannada.in): ಮಂಡ್ಯ ಜಿಲ್ಲೆಗೆ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಹಾಗೂ ಮೆಡಿಸಿನ್ ಪೂರೈಕೆ ಮಾಡುವಂತೆ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದರು.
ಸಚಿವರ ಮನವಿಗೆ ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಅಧಿಕಾರಿಗಳಿಗೆ ಶೀಘ್ರವೆ ಎಲ್ಲ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವಂತೆ ಸೂಚನೆ ನೀಡಿದರು. ಮಂಡ್ಯ ಜಿಲ್ಲೆಗೆ ಆಕ್ಸಿಜನ್ ಎಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಬೇಕು ಎಂದು ಈಗಾಗಲೆ ಸೂಚನೆ ನೀಡಲಾಗಿದೆ. ಅದರಂತೆ ನಿಗದಿಪಡಿಸಿರುವ ಮೆಡಿಕಲ್ ಆಮ್ಲಜನಕವನ್ನು ಸೂಕ್ತ ಪ್ರಮಾಣದಲ್ಲಿ ದಿನಂಪ್ರತಿ ಸರಬರಾಜು ಮಾಡುವಂತೆ ಸಿಎಂ ಬಿಎಸ್ ಯಡಿಯೂರಪ್ಪ, ಮುಖ್ಯಕಾರ್ಯದರ್ಶಿಯವರಿಗೆ ಸೂಚನೆ ನೀಡಿದರು.
ಪ್ರತಿದಿನ 32 kL ಆಕ್ಸಿಜನ್ ಅಗತ್ಯವಿದೆ. ಸದ್ಯ ಆರೋಗ್ಯ ಇಲಾಖೆ 13KL ನೀಡುವಂತೆ ಆದೇಶಿಸಿದೆ. ಮೈಸೂರಿನಿಂದ ಆಕ್ಸಿಜನ್ ಬರಬೇಕು. ಬೇರೆ ಜಿಲ್ಲೆಗಳಿಂದಲೂ ಆಕ್ಸಿಜನ್ ಸರಬರಾಜು ಆಗುತ್ತಿದೆ. ಆದರೆ ಕೆಲವೊಮ್ಮೆ ಸರಿಯಾದ ಸಮಯಕ್ಕೆ ಸರಬರಾಜು ಆಗುತ್ತಿಲ್ಲ. ಇದರಿಂದ ಕೋವಿಡ್ ಸೋಂಕಿತರು ಆತಂಕಕ್ಕೆ ಈಡಾಗುವ ಸಂಭವ ಇದೆ. ಹೀಗಾಗಿ ಯಾವ ಸಂದರ್ಭದಲ್ಲೂ ವಿಳಂಬವಾಗದಂತೆ ಸರಬರಾಜಿಗೆ ಸಚಿವರು ಮುಖ್ಯಮಂತ್ರಿಗಳನ್ನು ವಿನಂತಿಸಿದರು. ಸಚಿವರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಬಿಎಸ್ ವೈ, ತಕ್ಷಣ ಮುಖ್ಯಕಾರ್ಯದರ್ಶಿಗಳನ್ನು ಕರೆದು ಸ್ಪಷ್ಟ ನಿರ್ದೇಶನ ನೀಡಿದರು.
ಮುಖ್ಯಕಾರ್ಯದರ್ಶಿಗಳು ಮುಖ್ಯಮಂತ್ರಿಗಳ ಸೂಚನೆಯಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಕ್ಸಿಜನ್, ಮೆಡಿಸಿನ್ ಸೇರಿದಂತೆ ಯಾವುದೇ ಅತ್ಯವಶ್ಯಕಗಳ ಪೂರೈಕೆಗೆ ವಿಳಂಬವಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಮನವಿಗೆ ಸ್ಪಂದಿಸಿ, ಸೂಕ್ತ ಕ್ರಮ ಜರುಗಿಸಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಕಾರ್ಯದರ್ಶಿಗಳಿಗೆ ಸಚಿವ ಡಾ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದರು.
Key words: Minister -CM BS Yeddyurappa -immediately -responded –minister- Narayana Gowda- request.