ಮೈಸೂರು,ಮಾ,2,2021(www.justkannada.in): ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಭೇಟಿ ನೀಡಿ ಮಾತುಕತೆ ನಡೆಸಿದರು.
ಜಯಲಕ್ಷ್ಮಿಪುರಂ ನಲ್ಲಿರುವ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಸಚಿವರಾದ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದ ಸಚಿವ ಯೋಗೇಶ್ವರ್, ಶ್ರೀನಿವಾಸ್ ಪ್ರಸಾದ್ ಅವರ ಜತೆ ಮಾತುಕತೆ ನಡೆಸಿದರು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನ ಬಲಗೊಳಿಸಲು ಇಂಗಿತ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರನ್ನ ಸಚಿವ ಸಿಪಿ ಯೋಗೇಶ್ವರ್ ಭೇಟಿಯಾಗುತ್ತಿದ್ದಾರೆ.
ಈ ವೇಳೆ ಮಾತನಾಡಿರುವ ಸಚಿವ ಸಿ.ಪಿ ಯೋಗೇಶ್ವರ್, ಶ್ರೀನಿವಾಸ್ ಪ್ರಸಾದ್ ಹಾಗೂ ನನ್ನ ನಡುವಿನ ಸಂಬಂಧ ಹಳೆಯದು. ಶ್ರೀನಿವಾಸ್ ಪ್ರಸಾದ್ ಅವರ ಆಶೀರ್ವಾದ ಪಡೆಯಲು ಬಂದಿದ್ದೆ. ಸೈನಿಕ ಸಿನಿಮಾ ಮಾಡುವ ಸಮಯದಲ್ಲಿ ಕಾರ್ಗಿಲ್ ನಲ್ಲಿ ಸಿನೆಮಾ ಮಾಡಲು ಸಹಾಯ ಮಾಡಿದ್ರು. ಅಂದು ಪ್ರಸಾದ್ ರವರು ಕೇಂದ್ರ ಸಚಿವರಾಗಿದ್ರು. ಸರ್ಕಾರ ಬಂದಾಗಲೂ ಪ್ರಸಾದ್ ರ ಮಾರ್ಗದರ್ಶನ ಇತ್ತು. ಮೈಸೂರಿನ ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಸಲಹೆ ಪಡೆದುಕೊಂಡಿದ್ದೇನೆ. ನನ್ನ ಪ್ರಸಾದ್ ಅವರ ನಡುವಿನ ಭೇಟಿ ಸೌಹಾರ್ದಯುತ ಅಷ್ಟೇ ಎಂದರು.
ಹೆಚ್. ವಿಶ್ವನಾಥ್ ಇಂದು ಸಿಕ್ಕರೆ ನಾನು ಭೇಟಿಯಾಗುವೆ…
ಯೊಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಇತ್ತಿಚೆಗಷ್ಟೇ ಯೋಗೇಶ್ವರ್ ವಿರುದ್ಧ ಬಿಜೆಪಿ ಎಂಎಲ್ ಸಿ ಹೆಚ್. ವಿಶ್ವನಾಥ್ ಕಿಡಿಕಾರಿದ್ದರು. ಇನ್ನು ಹೆಚ್.ವಿಶ್ವನಾಥ್ ಭೇಟಿಯಾಗುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಪಿ ಯೋಗೇಶ್ವರ್, ವಿಶ್ವನಾಥ್ ಭೇಟಿ ಮಾಡಲು ನನಗೆ ಯಾವುದೇ ಕೀಳರಿಮೆ ಇಲ್ಲ. ಅವರು ಇಂದು ಸಿಕ್ಕರೆ ನಾನು ಭೇಟಿಯಾಗುವೆ ಎಂದು ತಿಳಿಸಿದರು.
ನಮಗೆ ವೈಯಕ್ತಿಕ ಟೀಕೆಗಳ ಬಗ್ಗೆ ಮಾತಾಡಲು ಆಸಕ್ತಿ ಇಲ್ಲ. ಅವರು ಹಿರಿಯರಿದ್ದಾರೆ. ಆರೋಪ ಪ್ರತ್ಯಾರೋಪ ಮಾಡೋದು ಸಹಜ. ಅವರು ನನ್ನ ಮೇಲೆ ಆರೋಪ ಮಾಡಿದ್ರು ನನಗೆ ಯಾವುದೇ ಬೇಸರ ಇಲ್ಲ. ಸಮಯ ಸಂದರ್ಭದಲ್ಲಿ ಮಾತ್ರ ಕೆಲವೊಂದು ಮಾತು ಬರುತ್ತೆ. ಅದು ರಾಜಕೀಯದಲ್ಲಿ ಸರ್ವೇ ಸಾಮಾನ್ಯ. ವಿಶ್ವನಾಥ್ ಅವರು ಭೇಟಿಗೆ ಅವಕಾಶ ಸಿಕ್ಕರೆ ಖಂಡಿತ ಭೇಟಿಯಾಗುತ್ತೇನೆ ಎಂದು ಸಚಿವ ಸಿಪಿ ಯೋಗೇಶ್ವರ್ ತಿಳಿಸಿದರು.
Key words: Minister -CP Yogeshwar -visits -MP Srinivasa Prasad-residence-mysore