ಬೆಂಗಳೂರು:ಜುಲೈ-30: ಮಾಜಿ ಸಚಿವೆ ಜಯಮಾಲಾ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ವಿಚಾರಕ್ಕೆ ಸಂಬಂಧಿಸಿದಂತೆ 84 ಕೋಟಿ ರೂ ಹಣದ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರನೊಬ್ಬ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ವಿಜಯನಗರದ ನಿವಾಸಿ ಎಸ್ ಆರ್ ಶಿವಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ. ಈತ ಆತ್ಮಹತ್ಯೆ ಯತ್ನಕ್ಕು ಮೊದಲು 4 ಪುಟಗಳ ಡೆತ್ ನೋಟ್ ಬರೆದಿಟ್ತಿದ್ದು, ಅದರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾನು ಅಂಗನವಾಡಿಗಳಿಗೆ ಆಹಾರ ಸರಬರಾಜು ಗುತ್ತಿಗೆ ಪಡೆದಿರುವುದಾಗಿ ಹಾಗೂ ಕೆಲ ಗುತ್ತಿಗೆದಾರರು ಗುತ್ತಿಗೆ ಪಡೆಯಲು ಯಾವೆಲ್ಲ ರೀತಿಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತೆದೆ ಎಂಬುದನ್ನು ವಿವರಿಸಿದ್ದಾರೆ. ಅಲ್ಲದೇ ಪ್ರಮುಖವಾಗಿ ಮಾಜಿ ಸಚಿವೆ ಜಯಮಾಲಾ ಅವರೇ ತನ್ನ ಸಾವಿಗೆ ಜವಾಬ್ದಾರರು ಎಂದೂ ಬರೆದಿಟ್ಟಿದ್ದಾನೆ.
ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿವಕುಮಾರ್ ನನ್ನು ಸುಗುಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನಿಡಲಾಗಿದ್ದು, ಸಧ್ಯ ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕದ 62,580 ಅಂಗನವಾಡಿ ಕೇಂದ್ರಗಳು ಮತ್ತು ಕರ್ನಾಟಕದ 3,331 ಮಿನಿ-ಅಂಗನವಾಡಿ ಕೇಂದ್ರಗಳಿಗೆ ‘ಪೌಷ್ಟಿಕ ಆಹಾರ’ ಪೂರೈಕೆ ಮಾಡುವ ಗುತ್ತಿಗೆ ನಿಡುವ ಸಂಬಂಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಜಯಮಾಲಾ ಅವರು 84 ಕೋಟಿ ರೂ ಲಂಚದ ಬೇಡಿಕೆಯಿಟ್ಟಿದ್ದು, ಒಪ್ಪಂದ ಕೂಡ ಮಾಡಿಕೊಂಡಿದ್ದರು. ಅದಕ್ಕೆ 1 ಕೋಟಿ ರೂ ಹಣವನ್ನು ಮುಂಗಡವಾಗಿ ಪಾವತಿ ಮಾಡಿದ್ದೆ.
ಸಚಿವೆಯಾಗಿದ್ದ ಜಯಮಾಲಾ ಅವರನ್ನು ಅವರ ಸ್ನೇಹಿತರಾದ ಸಂತೋಷ್ ಪೈ ಜತೆ ಭೇಟಿಯಾಗಿದ್ದೆ. ಈ ಮೀಟಿಂಗ್ ಗಾಗಿ 10 ಲಕ್ಷ ರೂ ಹಣ ನೀಡಿದ್ದೇನೆ. ಬಳಿಕ ಸಚಿವೆ ಜಯಮಾಲಾ ಅವರಿಗೆ 1 ಕೋಟಿ ಹಣ ನಿಡಿದ್ದೇನೆ. ಆದರೆ ಅವರು ಒಮ್ಮೆಲೇ 84 ಕೋಟಿ ರೂಗಳನ್ನು ಒನ್ ಟೈಮ್ ಅಮೌಂಟ್ ಆಗಿ ನೀಡುವಂತೆ ಕೇಳಿದ್ದರು. ಆದರೆ ಶಿವಕುಮಾರ್ ಒಮ್ಮೆಲೇ ಇಷ್ಟು ಹಣ ನೀಡಲು ಸಾಧ್ಯವಿಲ್ಲ, ಇನ್ ಸ್ಟಾಲ್ ಮೆಂಟ್ ರೀತಿ ನೀಡುವುದಾಗಿ ಹೇಳಿದ್ದ. ಆದರೆ ಸಚಿವರು ಅದು ಸಾಧ್ಯವಿಲ್ಲ ಎಂದಿದ್ದರು ಎಂದು ಆರೋಪಿಸಿದ್ದಾನೆ.
ಈ ಬಗ್ಗೆ ಸಂತೋಷ್ ಪೈ ಅವರನ್ನು ವಿಚಾರಿಸಿದಾಗ, ನನಗೆ ಶಿವಕುಮಾರ್ ಗೊತ್ತು. ಆದರೆ ನಾವು ಶಿವಕುಮಾರ್ ರಿಂದ ಯಾವುದೇ ಹಣವನ್ನು ಪಡೆದಿಲ್ಲ ಹಾಗೂ ಹಣದ ಬೇಡಿಕೆಯನ್ನೂ ಇಟ್ಟಿಲ್ಲ. ಆತನೇ ನನ್ನಿಂದ 15 ಲಕ್ಷ ರೂ ಹಣ ಪಡೆದುಕೊಂಡಿದ್ದು, ವಾಪಸ್ ನೀಡುವಂತೆ ಕೇಳಿದ್ದೆ ಎಂದು ತಿಳಿಸಿದ್ದಾರೆ.
ಇಷ್ಟೇ ಅಲ್ಲ, ಮಧ್ಯವರ್ತಿಯಾದ ಮೆಹಬೂಬ್ ಪಾಷಾ ಮೂಲಕ ಮಾಜಿ ಡಬ್ಲ್ಯುಸಿಡಿ ಸಚಿವೆ ಉಮಾಶ್ರೀ ಅವರಿಗೆ ಕೂಡ 2.1 ಕೋಟಿ ರೂ.ಗಳನ್ನು ಪಾವತಿಸಿದ್ದೇನೆ ಎಂದು ಶಿವಕುಮಾರ್ ಹೇಳಿದ್ದಾರೆ.
ಆದರೆ ಮಾಜಿ ಸಚಿವೆಯರಾದ ಉಮಾಶ್ರೀ ಹಾಗೂ ಜಯಮಾಲಾ ಇಬ್ಬರೂ ಗುತ್ತಿಗೆದಾರ ಶಿವಕುಮಾರ್ ಆರೋಪ ತಳ್ಳಿಹಾಕಿದ್ದಾರೆ. ಶಿವಕುಮಾರ್ ಅವರಿಗೆ ಮಾನಸಿಕ ಸಮಸ್ಯೆಯಿದೆ ಎನಿಸುತ್ತಿದೆ. ಅನಗತ್ಯವಾಗಿ ಅವರು ನನ್ನ ವಿರುದ್ಧ ಹಣ ಪಡೆದ ಆರೋಪ ಮಾಡುತ್ತಿದ್ದಾರೆ. ಶಿವಕುಮಾರ್ ವಿರುದ್ಧ ನಾನು ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಜಯಮಾಲಾ ಗುಡುಗಿದ್ದಾರೆ.