ಮೈಸೂರು,ಫೆಬ್ರವರಿ,3,2025 (www.justkannada.in): ಯುವ ಸಮೂಹವು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ವಿಚಾರದಲ್ಲೂ ಆಳವಾದ ಅಧ್ಯಯನ ಕೈಗೊಳ್ಳಬೇಕು. ಯೂಟ್ಯೂಬ್, ಸಾಮಾಜಿಕ ಜಾಲತಾಣದ ಮೂಲಕ ಪರಿಪೂರ್ಣವಾದ ಸಮಾಜ ನಿರ್ಮಿಸಲು ಸಾಧ್ಯವಿಲ್ಲ. ಪುಸ್ತಕ ಓದುವುದರಿಂದ ಭೌದ್ಧಿಕವಾಗಿ ಬಲಾಢ್ಯರಾಗಲು ಸಾಧ್ಯವಿದೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪ್ರೊ.ಎನ್.ಲಕ್ಷ್ಮೀ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ, ‘ಅರಿವಿನ ಸಿರಿ’ ಅಭಿನಂದನಾ ಗ್ರಂಥ ಹಾಗೂ ನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಿ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿದರು.
ನಮ್ಮ ದೇಶದಲ್ಲಿರುವ ಅವೈಜ್ಞಾನಿಕತೆಯನ್ನು ತೊಲಗಿಸಲು ಶಿಕ್ಷಣ ಬಹಳ ಮುಖ್ಯವಾಗಿದೆ. ಶಿಕ್ಷಣವು ವೈಜ್ಞಾನಿಕತೆ ಹಾಗೂ ವೈಚಾರಿಕತೆಯಿಂದ ಕೂಡಿರಬೇಕು. ಮೂಢನಂಬಿಕೆ, ಅನಾಗರಿಕತೆ ಹಾಗೂ ಶೋಷಣೆಯನ್ನು ತೊಡೆದು ಹಾಕಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
“ಶಿಕ್ಷಣವು ಹುಲಿಯ ಹಾಲಿನಂತೆ, ಅದನ್ನು ಕುಡಿದವರು ಘರ್ಜಿಸಲೇ ಬೇಕು” ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತಿನಂತೆ ಬಡತನದ ಹಿನ್ನೆಲೆಯಲ್ಲಿ ಬೆಳೆದು ಬಂದ ಪ್ರೊ.ಎನ್.ಲಕ್ಷ್ಮೀ ಅವರು ವಿದ್ಯಾವಂತರಾಗಿ ಪ್ರಾಧ್ಯಾಪಕರ ಹುದ್ದೆಯಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ಲಾಘನೆ ಮಾಡಿದರು.
ಮಹಿಳೆಯರ ಸಮಾನತೆಗಾಗಿ ಬಾಬಾ ಸಾಹೇಬರು ಜಾರಿಗೆ ತಂದ “ಹಿಂದೂ ಕೋಡ್ ಬಿಲ್” ಕುರಿತು ಯಾವುದೇ ಕಾರ್ಯಾಗಾರದಲ್ಲಿ ಚರ್ಚೆಗಳು ನಡೆಯುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕಾದ ಮಹಿಳೆಯರು ಮೌಢ್ಯ, ಕಂದಾಚಾರಕ್ಕೆ ಸಿಲುಕಿದ್ದಾರೆ. ಪ್ರಸ್ತುತದಲ್ಲಿ ಹೆಣ್ಣುಮಕ್ಕಳು ವಿದ್ಯಾವಂತರಾಗಿದ್ದರೂ ಕೂಡಾ ಹೆಚ್ಚು ಮೌಢ್ಯದ ಕಡೆ ವಾಲುತ್ತಿದ್ದಾರೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರೊ.ಎನ್.ಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ಎಸ್.ಒ.ಯು ಕುಲಪತಿ ಶರಣಪ್ಪ ವಿ.ಹಲಸೆ, ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ರಾಮೇಗೌಡ, ಪ್ರೊ.ನಾಗಣ್ಣ, ಬಂಜಗೆರೆ ಜಯಪ್ರಕಾಶ್, ಚಿಂತಕ ಪ್ರೊ.ಭಗವಾನ್, ಚಂದ್ರಶೇಖರ್, ಕುಲಸಚಿವ ಪ್ರವೀಣ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Key words: Youth group, develop, book study, Minister, Dr. H.C. Mahadevappa