ಮೈಸೂರು,ಆಗಸ್ಟ್, 21,2023(www.justkannada.in): ದೇಶವು ಅಭಿವೃದ್ಧಿ ಹೊಂದಲು ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು. ಈ ಉದ್ದೇಶದಿಂದ ಸರ್ಕಾರವು ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ವಾರಕ್ಕೆರಡು ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಸೋಮವಾರ ಮಹಾರಾಜ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ತಿನ್ನಿಸುವ ಮೂಲಕ ಚಾಲನೆ ನೀಡಿ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿದರು.
ಬಾಲ್ಯದಲ್ಲಿ ನಮಗೆ ಮೂರು ಹೊತ್ತು ಊಟವೇ ಸಿಗುತ್ತಿರಲಿಲ್ಲ. ಬಡತನದ ದಿನಗಳಲ್ಲಿ ಮುದ್ದೆ ಜೊತೆಗೆ ಉಪ್ಪು ಮತ್ತು ಮೆಣಸಿನಕಾಯಿ ಸೇರಿಸಿ ಊಟ ಮಾಡುತ್ತಿದ್ದೆವು. ಆದರೆ ಪ್ರಸ್ತುತ ಯಾರೂ ಕೂಡ ಹಸಿವಿನಿಂದ ಬದುಕು ಸಾಗಿಸಬಾರದು. ಹಸಿವುಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಮಾಡಿದೆ ಎಂದು ಹೇಳಿದರು.
ಕಳೆದ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 8ನೇ ತರಗತಿ ಮಕ್ಕಳಿಗೆ ಮಾತ್ರ ವಾರ್ಷಿಕವಾಗಿ 46 ದಿನಗಳಿಗೆ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಅಥವಾ ಶೇಂಗಾಚಿಕ್ಕಿಯನ್ನು ವಿತರಿಸಲಾಗಿರುತ್ತಿತ್ತು. ಆದರೆ ನಮ್ಮ ಸರ್ಕಾರವು 1 ರಿಂದ 10ನೇ ತರಗತಿ ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಗಾಗಿ ಪ್ರಸಕ್ತ ಸಾಲಿನಲ್ಲಿ ವಾರ್ಷಿಕವಾಗಿ 80 ದಿನಗಳಿಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಒಟ್ಟು 2,228 ಶಾಲೆಗಳಿದ್ದು, ಅದರಲ್ಲಿ ಸರ್ಕಾರಿ ಶಾಲೆಗಳು 2,064 ಅನುದಾನಿತ 258 ಶಾಲೆಗಳು ಹಾಗೂ ಮೌಲನ್ ಅಜಾದ್ ಮಾದರಿ 6 ಶಾಲೆಗಳ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಈ ಯೋಜನೆಗೆ ಒಳಪಟ್ಟಿರುತ್ತಾರೆ. ಒಟ್ಟು 2,12,646 ವಿದ್ಯಾರ್ಥಿಗಳಲ್ಲಿ ಸರ್ಕಾರಿ ಶಾಲಾ 1,65,794 ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳು 46,852 ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ದಿನದಂತೆ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೆ ಘಟಕ ವೆಚ್ಚ 6 ರೂ.ಗಳಂತೆ ವಾರ್ಷಿಕ 80 ದಿನಗಳಿಗೆ ಪ್ರತಿಯೊಬ್ಬರಿಗೆ ತಲಾ 480 ರೂ. ಆಗಲಿದ್ದು, ಒಟ್ಟು ಎಲ್ಲಾ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 10,20,70,080 ರೂ.ಗಳನ್ನು ರಾಜ್ಯ ಸರ್ಕಾರವು ನೀಡುತ್ತಿದೆ ಎಂದು ಹೇಳಿದರು.
ವೈಜ್ಞಾನಿಕ ಮತ್ತು ವೈಚಾರಿಕತೆಯಿಂದ ಕೂಡಿದ ಶಿಕ್ಷಣ ಜಾರಿಗೆ ಬರಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಅದರಂತೆ ನಮ್ಮ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಯಾವುದೇ ಧರ್ಮ, ಜಾತಿ, ಮತದ ಗೊಂದಲಕ್ಕೆ ಒಳಗಾಗಿದೆ ಸಂವಿಧಾನದ ಆಶಯಗಳಿಗೆ ತಕ್ಕಂತೆ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಬದುಕು ಕಟ್ಟಿಕೊಳ್ಳುವಂತ ಕೌಶಲ್ಯವನ್ನು ತಿಳಿಸಿಕೊಡಬೇಕು. ಎಲ್ಲಾ ವಿದ್ಯಾರ್ಥಿಗಳು ಭಾರತದ ಉತ್ತಮ ಪ್ರಜೆಗಳಾಗಿ ಸಂವಿಧಾನದ ಆಶಯಕ್ಕೆ ಹಾಗೂ ಸ್ವಾತಂತ್ರ್ಯದ ಉದ್ದೇಶಗಳಿಗೆ ಅನುಗುಣವಾಗಿ ನಿಮ್ಮ ಬದುಕನ್ನು ನೀವೇ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಸಿ.ಎನ್.ಮಂಜೇಗೌಡ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
Key words: Minister -Dr. H. C. Mahadevappa – supplementary -nutritional food –program-mysore