ದೇಶದ ಆರ್ಥಿಕತೆ ಬೆಳವಣಿಯಲ್ಲಿ ಸಣ್ಣ, ಸೂಕ್ಷ್ಮ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸಿವೆ- ಸಚಿವ ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು ಫೆಬ್ರವರಿ, 22,2025 (www.justkannada.in): ದೇಶದ ಆರ್ಥಿಕತೆ ಬೆಳವಣಿಯಲ್ಲಿ ಸಣ್ಣ, ಸೂಕ್ಷ್ಮ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದ ಆವರಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಹಯೋಗದೊಂದಿಗೆ ಎರಡು ದಿನಗಳ ಕಾಲ ನಡೆಯುವ ಮಹಿಳಾ ಉದ್ಯಮಿಗಳಿಂದ ತಯಾರಿಸಲಾದ ಉತ್ಪನ್ನಗಳ ಪ್ರದರ್ಶನ ಮೇಳ ಮತ್ತು ಮಾರಾಟ ಮೇಳವನ್ನು ಸಚಿವ ಮಹದೇವಪ್ಪ ಉದ್ಘಾಟಿಸಿ ಮಾತನಾಡಿದರು.

ಕೊರೊನಾ ನಂತರದ 80 ಸಾವಿರ ಎಂಎಸ್ಎಂ ಮುಚ್ಚಿ ಹೋಗಿವೆ. ಇದರಿಂದ ಆರ್ಥಿಕತೆಯ ಬೆನ್ನಲೆಬು ಕುಸಿದು ಬಿದ್ದಿತು. ಈಗ ಮತ್ತೆ ಸಣ್ಣ, ಗುಡಿ ಕೈಗಾರಿಗಳು ಬೆಳವಣಿಗೆ ರಾಜ್ಯ ಸರ್ಕಾರ ರೂಪುರೇಷೆಗಳನ್ನು ರೂಪಿಸಿ ಅವಕಾಶಗಳನ್ನು ಒದಗಿಸುವ ವ್ಯವಸ್ಥೆ ಮಾಡುತ್ತಿದೆ ಎಂದರು.

ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದ ಸಂದರ್ಭದಲ್ಲಿ ಗುಡಿ ಕೈಗಾರಿಕೆಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ರೂಪಿಸಿದ್ದೆ. ಇದರ ಜೊತೆಗೆ ಕಡಕೊಳದ ಬಳಿ ಜಮೀನನ್ನು ಮಹಿಳಾ ಉದ್ಯಮಕ್ಕಾಗಿ ನೀಡಲಾಗಿದೆ. ಮಹಿಳೆಯರಿಗೆ ಸೂಕ್ತ ಅವಕಾಶಗಳನ್ನು ಒದಗಿಸಿದರೆ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ತಿಳಿಸಿದರು.

ಕಾಸಿಯಾ ಅಧ್ಯಕ್ಷರಾದ ಎಂ.ಜಿ.ರಾಜಗೋಪಾಲ್ ಮಾತನಾಡಿ, ಮಹಿಳೆಯರಿಗೆ ಉತ್ತೇಜನ ಹಾಗೂ ಪ್ರೋತ್ಸಾಹ ನೀಡಲು ಮೇಳವನ್ನು ಆಯೋಜಿಸಲಾಗಿದೆ. ಈ ಬಾರಿ ಒಟ್ಟಾರೆ 85 ಮಳಿಗೆಗಳಿದ್ದು, ಮಳಿಗೆಗಳಲ್ಲಿ ಮಹಿಳೆಯರಿಂದಲೇ ತಯಾರಿಸಲ್ಪಟ್ಟ ಇಂಜಿನಿಯರಿಂಗ್ ಸಂಬಂಧಿತ ವಸ್ತುಗಳು, ಮಕ್ಕಳ ಆಟಿಕೆಗಳು, ಆಹಾರೋತ್ಪನ್ನಗಳು, ಕರಕುಶಲ ವಸ್ತುಗಳು ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಮೈಸೂರು, ಚಾಮರಾಜನಗರ, ಮಂಡ್ಯ ಹಾಸನದ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದ್ದು, ಬೆಂಗಳೂರು, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ಮಹಿಳೆಯರು ಮಳಿಗೆಗಳನ್ನು ತೆರೆದಿದ್ದಾರೆ. ಮಹಿಳೆಯರ ಮಳಿಗೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಉತ್ತಮವಾದ ಮೂರು ಮಳಿಗೆಗಳಿಗೆ ಪ್ರಶಸ್ತಿಗಳನ್ನು ನೀಡುವುದರ ಜತೆಗೆ ಭಾಗಹಿಸಿದ ಪ್ರತಿಯೊಬ್ಬ ಮಹಿಳೆಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ಕಾಸಿಯಾ ಅಧ್ಯಕ್ಷರಾದ ಬಿ.ಆರ್.ಗಣೇಶ್ ರಾವ್, ಜಂಟಿ ಕಾರ್ಯದರ್ಶಿ ಎನ್.ಸತೀಶ್, ಜೆ.ಎಸ್.ಬಾಬು, ಖಜಾಂಚಿ ಎಚ್.ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

Key words: Small industries, development, country, economy, Minister, Dr HC Mahadevappa