ಬೆಂಗಳೂರು, ಆಗಸ್ಟ್. 10,2021(www.justkannada.in): ಸಮಯದ ಮಿತಿ ನೀಡಿ ಕೆಲಸ ಮುಗಿಸುವಂತೆ ಸೂಚಿಸಿದ್ದರೂ ಇನ್ನೂ ಯಾಕೆ ಕೆಲಸ ಪೂರ್ಣವಾಗಿಲ್ಲ. ನಿಗದಿತ ಸಮಯದಲ್ಲಿ ಕೆಲಸ ಮಾಡಲು ಏನು ಸಮಸ್ಯೆ. ಇಷ್ಟೊಂದು ನಿರ್ಲಕ್ಷ್ಯ ತೋರಿಸಿದ್ದು ಯಾಕೆ, ಎಲ್ಲ ಸೌಲಭ್ಯ ನೀಡಿದರೂ ಮೀನಮೇಷ ಎಣಿಸುತ್ತಿರುವುದು ಬೇಜವಾಬ್ದಾರಿಯ ಪರಮವಾವಧಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ರೇಷ್ಮೆ ಇಲಾಖೆ ಸಚಿವ ಡಾ. ಸಾರಾಯಣಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಿಕಾಸ ಸೌಧದಲ್ಲಿ ಕ್ರೀಡಾ ಇಲಾಖೆಯ ಪ್ರಗತಿಪರಿಶೀಲನಾ ಸಭೆ ನಡೆಸಿದ ಸಚಿವರು ಅಧಿಕಾರಿಗಳ ವಿಳಂಬ ನೀತಿಗೆ ಕಿಡಿಕಾರಿದರು. ಎರಡನೇ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಡಾ. ನಾರಾಯಣಗೌಡ ಅವರು, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇಲಾಖೆಯಲ್ಲಿ ಈಗಾಗಲೆ ಸಾಕಷ್ಟು ಕೆಲಸ ಮಾಡಿದ್ದೇನೆ. ಅರ್ಧದಲ್ಲಿ ಬಿಡಬಾರದು ಎಂಬ ಕಾರಣಕ್ಕೆ ಆಸಕ್ತಿಯಿಂದ ಕ್ರೀಡಾ ಇಲಾಖೆಯನ್ನೇ ಕೇಳಿ ಪಡೆದಿದ್ದೇನೆ. ಎಲ್ಲರು ಜವಾಬ್ದಾರಿಯಿಂದ ಕೆಲಸ ಮಾಡಿ. ಈ ಹಿಂದೆಯೂ ಇದೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಕಾರಣ, ಕೆಲವು ಪ್ರಮುಖ ಕಾರ್ಯಗಳನ್ನು ನಿಗದಿತ ಸಮಯದೊಳಗೆ ಮುಗಿಸುವಂತೆ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಜಕ್ಕೂರು ಏರೋಡ್ರಮ್ ರನ್ವೇ ಡಾಂಬರೀಕರಣ ಆಗಬೇಕು ಎಂದು ತಿಳಿಸಿದ್ದರೂ ಇನ್ನೂ ಕೆಲಸವೇ ಆರಂಭವಾಗಿಲ್ಲ. ಅನುದಾನ ಮಂಜೂರು ಮಾಡಿ ಕಾಮಗಾರಿ ಆರಂಭಿಸುವಂತೆ ಹೇಳಿದರೂ ಕೆಲಸ ಮಾಡದಿದ್ದರೆ ಪ್ರಗತಿ ಪರಿಶೀಲನಾ ಸಭೆ ನಡೆಸುವುದಾದರೂ ಯಾಕೆ, ಪ್ರತಿ ಸಭೆಯಲ್ಲೂ ತಿಂಗಳೊಳಗೆ ಕೆಲಸ ಮುಗಿಸಿ ಎಂದು ಹೇಳುವುದಕ್ಕಾಗಿ ಸಭೆ ಕರೆಯಬೇಕಾ ಎಂದು ಸಚಿವ ನಾರಾಯಣಗೌಡ ಅಧಿಕಾರಿಗಳ ವಿಳಂಬ ನೀತಿಗೆ ಬೇಸರ ವ್ಯಕ್ತಪಡಿಸಿದರು.
ಜಕ್ಕೂರ್ ಏರೋಡ್ರಮ್ ಸುತ್ತ DGCA ನಿಯಮ ಉಲ್ಲಂಘಸಿ ಕಟ್ಟಡ ನಿರ್ಮಾಣವಾಗಿದೆ. ಅದರ ಸರ್ವೆ ಕಾರ್ಯ ಮಾಡುವಂತೆ ಹೇಳಲಾಗಿತ್ತು. Bbmp ಜೊತೆ ಜಂಟಿ ಸರ್ವೆಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಇನ್ನೂ ಸರ್ವೆ ಕಾರ್ಯವನ್ನೇ ಆರಂಭಿಸಿಲ್ಲ. ಬಿಬಿಎಂಪಿ ಗೆ ಈ ಸಂಬಂಧ ಮತ್ತೊಮ್ಮೆ ಪತ್ರ ಬರೆಯುವಂತೆ ಸಚಿವರು ಸೂಚಿಸಿದರು. ಮಂಡ್ಯ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಂಬಂಧ ಆರ್ಥಿಕ ಅನುಮೋದನೆ ಪ್ರಸ್ತಾವನೆ ಕಳುಹಸಲಾಗಿದೆ. ಶೀಘ್ರದಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಪ್ಯಾರಿಸ್ ಓಲಂಪಿಕ್ ಸಿದ್ದತೆ
ಮುಂದಿನ ಓಲಂಪಿಕ್ ಗೆ ಸಿದ್ದತೆ ಮಾಡಲಾಗಿದೆ. ರಾಜ್ಯದಿಂದ 100 ಕ್ರೀಡಾಪಟುಗಳನ್ನು ಓಲಂಪಿಕ್ ಗೆ ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೆ 35 ಕ್ರೀಡಾಪಟುಗಳ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ಗುರುತಿಸಲಾಗಿದೆ. 100 ಕ್ರೀಡಾಪಟುಗಳನ್ನು ಗುರುತಿಸಿ, ಸೂಕ್ತ ತರಬೇತಿ ನೀಡಲಾಗುವುದು.
ಸೈಕ್ಲಿಂಗ್ ವೆಲೋಡ್ರಮ್ ಕಾಮಗಾರಿ ಮುಗಿಸಲು ಇನ್ನೆಷ್ಟು ಸಮಯ ಬೇಕು?
ವಿಜಯಪುರದಲ್ಲಿ ಸೈಕ್ಲಿಂಗ್ ವಲೋಡ್ರಮ್ ಕಾಮಗಾರಿ ಅವೈಜ್ಞಾನಿಕವಾಗಿತ್ತು ಎಂಬ ಕಾರಣಕ್ಕೆ ಸ್ಥಗಿತಗೊಳಿಸಲಾಗಿತ್ತು. ಮಾರ್ಚ್ 1 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿತ್ತು. ಆದರೆ ಇನ್ನೂ ಕಾಮಗಾರಿಯೇ ಪುನಾರಂಭ ಮಾಡಿಲ್ಲ . ಸೂಚನೆ ನೀಡಿ 5 ತಿಂಗಳು ಕಳೆದರೂ ಕೆಲಸವನ್ನೇ ಆರಂಭಿಸಿಲ್ಲ. ಇದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ನಿಮ್ಮ ನಿರ್ಲಕ್ಷ್ಯದಿಂದ ಸೈಕ್ಲಿಂಗ್ ನಲ್ಲಿ ಸಾಧನೆ ಮಾಡುವ ಕನಸು ಹೊತ್ತ ಕ್ರೀಡಾಪಟುಗಳ ಆಸೆಗೆ ತಣ್ಣೀರು ಸುರಿಯುತ್ತಿದ್ದೀರಿ, ಇಚ್ಚಾಶಕ್ತಿಯಿಂದ ಕೆಲಸ ಮಾಡಿ ಎಂದು ಸಚಿವ ನಾರಾಯಣಗೌಡ ಅಧಿಕಾರಿಗಳ ಮೇಲೆ ಗರಂ ಆದರು.
ಅಧಿಕಾರಿಗಳ ನಡೆಗೆ ಎಸಿಎಸ್ ಡಾ.ಶಾಲಿನಿ ರಜನೀಶ್ ಗರಂ
ಸೈಕ್ಲಿಂಗ್ ವೆಲೋಡ್ರಮ್ ಕಾಮಗಾರಿ ಪುನಾರಂಭ ಯಾಕೆ ಆಗಿಲ್ಲ. ಏನಾಗಿದೆ, ಏನಾಗಬೇಕು ಎಂದು ಈವರೆಗೆ ಯಾಕೆ ಮಾಹಿತಿ ನೀಡಿಲ್ಲ. ಯಾರು ಇದನ್ನ ನೋಡಿಕೊಳ್ಳಬೇಕು. ಸರ್ಟಿಫೈ ಮಾಡಬೇಕಾದವರು ಯಾರು ಎಂದು ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಗರಂ ಆದರು. ಇನ್ನು 3 ತಿಂಗಳೊಳಗೆ ಕೆಲಸ ಆಗಲೇಬೇಕು. ಇದು ಅಧಿಕಾರಿಗಳ ಜವಾಬ್ದಾರಿ ಎಂದು ಸೂಚಿಸಿದರು.
ರಾಜ್ಯ ವಲಯದಲ್ಲಿ ಶೇ. 80 ರಷ್ಟು ಪ್ರಗತಿಯಾಗಿದೆ. ಆದರೆ ಜಿಲ್ಲಾ ವಲಯದಲ್ಲಿ ಶೇ. 25 ರಷ್ಟು ಮಾತ್ರ ಪ್ರಗತಿ ಆಗಿದೆ. ಎಲ್ಲ ಕಾಮಗಾರಿಗಳು ತ್ವರಿತಗತಿಯಲ್ಲಿ ಆಗಬೇಕು. ಸ್ಥಗಿತವಾಗಿರುವ ಕಾಮಗಾರಿ ತಕ್ಷಣ ಆರಂಭವಾಗಬೇಕು. ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ಮಾಡಲಾಗುವುದು. ಸಭೆಯಲ್ಲಿ ನಿರ್ಣಯಿಸಿದಂತೆ ಕೆಲಸ ಆಗಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳೆ ಹೊಣೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಖಡಕ್ ಎಚ್ಚರಿಕೆ ನೀಡಿದರು. ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Key words: Minister -Dr. Narayanagowda –officer-bangalore