ಬೆಂಗಳೂರು, ಮಾರ್ಚ್,15,2025 (www.justkannada.in): ಬೇಲೂರು ತಾಲೂಕಿನ ಬಿಕ್ಕೋಡು, ಅರೆಹಳ್ಳಿ ಸುತ್ತಮುತ್ತ ಜನರಿಗೆ ಉಪಟಳ ನೀಡುತ್ತಿರುವ 3 ಪುಂಡಾನೆ ಗುರುತಿಸಿದ್ದು, ಈ ಆನೆಗಳನ್ನು ಸೆರೆ ಹಿಡಿಯಲು ಮತ್ತು ಕೂಡಲೇ ಇದೇ ಪ್ರದೇಶದಲ್ಲಿ ಆನೆ ಕಾರ್ಯಪಡೆಯ ಕಚೇರಿ ಸ್ಥಾಪಿಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿಯನ್ನು ನಿಯೋಜಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಬೇಲೂರು ತಾಲೂಕು ಕೋಗೋಡಿನ ತೋಟದಲ್ಲಿ ನಿನ್ನೆ ಮಹಿಳೆಯೊಬ್ಬರು ಆನೆ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಸಚಿವ ಈಶ್ವರ್ ಖಂಡ್ರೆ, ಹಾಸನ ವಲಯಕ್ಕೆ 2 ಥರ್ಮಲ್ ಕ್ಯಾಮರಾ ಸಹಿತ ಡ್ರೋನ್ ಖರೀದಿಸಿ ರಾತ್ರಿಯ ವೇಳೆ ಕೂಡ ಆನೆಗಳ ಸಂಚಾರದ ಬಗ್ಗೆ ನಿಗಾ ಇಟ್ಟು, ಸ್ಥಳೀಯರಿಗೆ ಸಕಾಲದಲ್ಲಿ ಮಾಹಿತಿ ನೀಡಲು ಸೂಚಿಸಿದರು.
ಆನೆಗಳ ಸಮಸ್ಯೆ ಹೆಚ್ಚಿರುವ ಪ್ರದೇಶದಲ್ಲಿ ತುರ್ತು ಸ್ಪಂದನೆಗಳಾಗಿ 2 ಹೆಚ್ಚುವರಿ ಜೀಪುಗಳು ಮತ್ತು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ, ಆನೆಗಳ ಸಂಚಾರದ ಮಾಹಿತಿ ಬಂದ ಕೂಡಲೇ ಸ್ಪಂದಿಸುವಂತೆ ಈಶ್ವರ ಖಂಡ್ರೆ ಸೂಚಿಸಿದರು.
ತೋಟದ ಸಿಬ್ಬಂದಿಗೆ ತರಬೇತಿ:
ಬೇಲೂರು ಭಾಗದ ಜನರಿಗೆ, ತೋಟದ ಕಾರ್ಮಿಕರಿಗೆ ಆನೆಗಳ ಸ್ವಭಾವ, ಆನೆ ಬಂದಾಗ ಏನೆಲ್ಲಾ ಮುಂಜಾಗ್ರತಾ ಕ್ರಮ ವಹಿಸಬೇಕು, ಹೇಗೆ ನಡೆದುಕೊಳ್ಳಬೇಕು, ಸಂಜೆ ಮತ್ತು ಬೆಳಗಿನ ವೇಳೆ ಓಡಾಡುವಾಗ ಕೈಗೊಳ್ಳಬೇಕಾದ ಎಚ್ಚರಿಕೆ ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸಲು ತೋಟದ ಮಾಲೀಕರ ಸಹಕಾರ ಪಡೆದು ಜಾಗೃತಿ ಮೂಡಿಸಲು ಮತ್ತು ಗ್ರಾಮಮಟ್ಟದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವಂತೆ ಆದೇಶ ನೀಡಿದರು.
ಇಟಿಎಫ್ ಸಿಬ್ಬಂದಿಗೆ ಅಗತ್ಯ ಸೌಲಭ್ಯ:
ಆನೆ ಕಾರ್ಯಪಡೆ ಮತ್ತು ಎಡಿಸಿ ಹೊರಗುತ್ತಿಗೆ ಸಿಬ್ಬಂದಿಗೆ ತಿಂಗಳು ತಿಂಗಳು ವೇತನ, ಆನೆ ಕಾರ್ಯಪಡೆಯ ಸಿಬ್ಬಂದಿಗೆ ಆಹಾರ ಭತ್ಯೆ, ಸಮವಸ್ತ್ರ, ಶೂ, ಜಾಕೆಟ್ ಹಾಗೂ ವಿಮಾ ಸೌಲಭ್ಯ ನೀಡುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಮತ್ತು ಮೊಬೈಲ್ ಸಿಗ್ನಲ್ ದೊರಕದ ಕಡೆಗಳಲ್ಲಿ ಆನೆ ಕಾರ್ಯಪಡೆ ಸಿಬ್ಬಂದಿಗೆ ವಾಕಿ ಟಾಕಿ ನೀಡುವಂತೆಯೂ ಈಶ್ವರ ಖಂಡ್ರೆ ಸೂಚಿಸಿದರು.
ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಸುಭಾಷ್ ಮಾಲ್ಕಡೆ ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
Key words: Emergency meeting, Minister, Ishwar Khandre, Elephant