ತೆಲಂಗಾಣ ಸಿಎಂ ರೇವಂತರೆಡ್ಡಿ ಭೇಟಿಯಾಗಿ ಚರ್ಚಿಸಿದ ಸಚಿವ ಕೆ.ಹೆಚ್.ಮುನಿಯಪ್ಪ

ನವದೆಹಲಿ.ನವೆಂಬರ್, 26,2024 (www.justkannada.in): ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ನವದೆಹಲಿಯಲ್ಲಿಂದು ತೆಲಂಗಾಣ ರಾಜ್ಯದ ಮುಖ್ಯಮಂತ್ರಿ  ರೇವಂತರೆಡ್ಡಿ ಅವರನ್ನು ಭೇಟಿಯಾಗಿ ಒಳಮೀಸಲಾತಿ ಜಾರಿಯ ಕುರಿತು ಚರ್ಚಿಸಿದರು. ತೆಲಂಗಾಣ ಸರ್ಕಾರವು 60 ದಿನಗಳ ಒಳಗಾಗಿ ಅದರ ಸಂಪೂರ್ಣ ವರದಿ ಪಡೆದು ಜಾರಿಗೊಳಿಸಲು ತೀರ್ಮಾನಿಸಿದ್ದು, ಈ ಕುರಿತು ರೇವಂತ್ ರೆಡ್ಡಿ ಅವರ ಜೊತೆ ಸುದೀರ್ಘ ಚರ್ಚೆ ನಡೆಸಿದರು.

ಸಂವಿಧಾನ ದಿನಾಚರಣೆ ದಿನದಂದು ನಾಡಿನ ಜನತೆಗೆ ಶುಭ ಕೋರಿದ ಸಚಿವ ಕೆಎಚ್ ಮುನಿಯಪ್ಪ,  ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡಲು ಅವಕಾಶ ಮಾಡಿದ ಮಹಾತ್ಮಗಾಂಧಿರವರ ಮಾರ್ಗದರ್ಶನದಲ್ಲಿ ಪಂಡಿತ್ ಜವಹಾರ್ಲಾಲ್ ನೆಹರು ಅವರು ಸಂವಿಧಾನ ರಚನಾ ಸಮಿತಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಅವರ ಅನುಭವದಿಂದ ಈ ದೇಶಕ್ಕೆ ಸಂವಿಧಾನವನ್ನು ನೀಡಿದ್ದಾರೆ ಎಂದರು.

ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿದ್ದು, ಅದರಲ್ಲಿ ಸಮವಾಗಿ ಮೀಸಲಾತಿ ಹಂಚುವುದೇ ಮೂಲ ಉದ್ದೇಶ ಸುಪ್ರೀಂ ಕೋರ್ಟ್ ನಿಂದ ಒಳ ಮೀಸಲಾತಿ ಕುರಿತು ಒಂದು ಐತಿಹಾಸಿಕ ತೀರ್ಪು ಬಂದಿದ್ದು, ಅದನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಸರ್ಕಾರವು ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗ ರಚಿಸಿದ್ದು, ಮೂರು ತಿಂಗಳ ಒಳಗಾಗಿ ವರದಿಗಳನ್ನು ಪಡೆದು ಮುಖ್ಯಮಂತ್ರಿ ಸಿದ್ಧರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಜಾರಿಗೊಳಿಸಲು ಬದ್ಧರಾಗಿದ್ದಾರೆ ಎಂದರು.

75 ವರ್ಷಗಳಿಂದ ಶೋಷಿತರಲ್ಲಿ ಶೋಷಿತರಾಗಿರುವ ಸಮುದಾಯಗಳಿಗೆ ನ್ಯಾಯ ಸಿಗುವ ಕಾಲ ಬಂದಿದ್ದು. ತೆಲಂಗಾಣ ಸರ್ಕಾರದ ಮುಖ್ಯಮಂತ್ರಿ ರೇವಂತರೆಡ್ಡಿ ಅವರು ಒಳಮೀಸಲಾತಿ ಜಾರಿಗೊಳಿಸುವುದು ಅತ್ಯವಶ್ಯಕ ಎಂಬ ನಿರ್ಣಯಕ್ಕೆ ಬಂದಿದ್ದು, ಎಲ್ಲಾ ಜಾತಿಗಳಿಗೂ ಸಮವಾಗಿ ಒಳಮೀಸಲಾತಿ ಹಂಚಿಕೆ ಮಾಡುವ ಮೂಲಕ ಅವಕಾಶ ಕಲ್ಪಿಸಲಾಗುವುದು ಎಂದರು.

Key words: Minister, K.H. Muniyappa, met, Telangana CM, Revanth Reddy